Karnataka

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶ|ಪ್ರಧಾನಿ ಮೋದಿ, ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿ ಸಂತಾಪ|ಸೋಮವಾರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ದೇವೇಗೌಡ ಅವರಿಗೆ ಕಳೆದ 3 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೇ ಶನಿವಾರದಂದು ಸಂಜೆ 4.30ರ ಸುಮಾರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕಳೆದ 3 ದಿನಗಳಿಂದ ಚೆನ್ನಮ್ಮ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

1954 ಮೇ 25ರಂದು ಹೆಚ್​​.ಡಿ. ದೇವೇಗೌಡರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್‌ ಡಿ ರೇವಣ್ಣ ಸೇರಿದಂತೆ 6 ಜನ ಮಕ್ಕಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ|

ಮಾಜಿ ಪ್ರಧಾನಮಂತ್ರಿ ಶ್ರೀ ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಶೋಕ ಸಂದೇಶವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಚೆನ್ನಮ್ಮನವರು ತಮ್ಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್ಧತೆಗಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.

ಈ ದುಃಖದ ಸಮಯದಲ್ಲಿ, ದೇವೇಗೌಡರು ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನಕ್ಕೆ ಮಾಜಿ ಸಿಎಂ‌ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜನತಾ ಪರಿವಾರದಲ್ಲಿದ್ದಾಗ ದೇವೇಗೌಡರ ಕುಟುಂಬದೊಂದಿಗೆ ನಿಕಟವಾದ ಒಡನಾಟವಿತ್ತು.

ಚೆನ್ನಮ್ಮನವರು ಜೀವನದಲ್ಲಿ ಎದುರಾದ ಕಷ್ಟ, ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿಯಾಗಿದ್ದರು ಎಂದಿದ್ದಾರೆ.

ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದರು.

ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಚೆನ್ನಮ್ಮನವರು, ಮಾದರಿ ಸತಿಯಾಗಿದ್ದರೆಂದು ಅವರ ಬಗ್ಗೆ ಅಕ್ಕರೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ದೇವೇಗೌಡರಿಗೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ,ಗೌಡರ ಕುಟುಂಬ ಸದಸ್ಯರ ನೋವನಲ್ಲಿ ತಾವೂ ಭಾಗಿಯಾಗಿದ್ದೇನೆಂದು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಮಾಜಿ ಪ್ರಧಾನಮಂತ್ರಿಗಳಾದ ಹೆಚ್‌.ಡಿ ದೇವೇಗೌಡರ ಧರ್ಮಪತ್ನಿ, ಮಾತೃ ಸ್ವರೂಪಿ ಶ್ರೀಮತಿ ಚೆನ್ನಮ್ಮ ಅವರು ನಿಧನರಾಗಿರುವ ವಿಷಯ ಅತೀವ ದುಃಖವನ್ನುಂಟು ಮಾಡಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಮತಿ ಚೆನ್ನಮ್ಮ ಅವರು ಅಪಾರ ದೈವಭಕ್ತೆಯಾಗಿದ್ದರು. ಅವರು ಆಸ್ಪತ್ರೆಯಿಂದ ಗುಣಮುಖರಾಗಿ ವಾಪಸ್ಸು ಬರುತ್ತಾರೆಂದು ಎಲ್ಲರೂ ನಂಬಿಕೆ ಇಟ್ಟುಕೊಂಡಿದ್ದೆವು. ಆದರೆ ಆ ನಂಬಿಕೆ ಸುಳ್ಳಾಗಿರುವುದಕ್ಕೆ ಬಹಳ ಬೇಸರವಾಗಿದೆ.

ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎನ್ನುತ್ತಾರೆ. ಅದರಂತೆ ಚೆನ್ನಮ್ಮನವರು ದೇವೇಗೌಡರ ಪ್ರತಿ ಯಶಸ್ಸಿನ‌ ಹಿಂದೆ ಹಾಗೂ ರಾಜಕೀಯದ ಏಳು-ಬೀಳುಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದರು.

ಮನೆಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಮೂಲಕ ಅವರು ಗೌಡರ ಬದುಕಿನ ನಿಜವಾದ ಶಕ್ತಿಯಾಗಿದ್ದರು. ಯಾವುದೇ ಪ್ರಚಾರ ಬಯಸದೆ ತೆರೆಮರೆಯಲ್ಲಿ ಇದ್ದರು. ಅವರ ಅಗಲಿಕೆ ಕುಟುಂಬಸ್ಥರಿಗೆ ಹಾಗೂ ಆಪ್ತರಿಗೆ ತುಂಬಲಾರದ ನಷ್ಟವಾಗಿದೆ.

ಭಗವಂತ ಹಿರಿಯರ ಆತ್ಮಕ್ಕೆ ಚಿರಶಾಂತಿ ನೀಡಲಿ, ಕುಟುಂಬಸ್ಥರಿಗೆ, ಬಂಧು-ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.

ದಶಕಗಳ ಕಾಲದ ಸಾರ್ವಜನಿಕ ಸೇವೆಯ ಮೂಲಕ ಅವರ ನಿರಂತರ ಉಪಸ್ಥಿತಿಯೇ ಅವರ ಶಕ್ತಿ ಎಂದು ಬಣ್ಣಿಸಿರುವ ಅವರು, ದೇವೇಗೌಡರ ಕುಟುಂಬಕ್ಕೆ ಅವರ ಅಗಲಿಕೆಯ ಶಕ್ತಿ ಭಗವಂತ ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button