CrimeDistrictShivamogga

ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಪೊಲೀಸರಿಂದ ಫೈರಿಂಗ್|ಗಾಂಜಾ ವ್ಯಸನಿಯಿಂದ ಕಾನಸ್ಟೇಬಲ್‌ ಮೇಲೆ ಲಾಂಗ್‌ನಿಂದ ಹಲ್ಲೆ|ಅಜ್ಜಿ ಕೊಲೆಗೈದ ಆರೋಪಿಗೆ ಗುಂಡೇಟು, ಬಂಧನ

ಆರೋಪಿ ಕಿಶೋರ್‌ ಅಡಗಿದ್ದ ಜಾಗಕ್ಕೆ ತೆರಳಿದ ಪೊಲೀಸರಿಗೆ ಆತನ ಕೈಯಲ್ಲಿ ಚಾಕು ಇರುವದು ಕಂಡಿದೆ. ಹೀಗಾಗಿ ಶರಣಾಗಲು ತಿಳಿಸಿದ್ದಾರೆ. ಆದರೆ ಆರೋಪಿ ಕಿಶೋರ್‌, ಚಾಕುವಿನಿಂದ ಕಾನಸ್ಟೇಬಲ್‌ ಗಣೇಶ ಎಂಬುವವರ ಮೇಲೆ ದಾಳಿ ನಡೆಸಿದ್ದಾನೆ.

ಶಿವಮೊಗ್ಗ: ಗುರುವಾರ ಬೆಳ್ಳಂಬೆಳಗ್ಗೆ ಶಿವಮೊಗ್ಗ ನಗರದಲ್ಲಿ ಗುಂಡಿನ ಶಬ್ದ ಕೇಳಿ ಬಂದಿದೆ. ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಲಾಂಗ್‌ನಿಂದ ಹಲ್ಲೆಗೆ ಮುಂದಾಗಿದ್ದ ವ್ಯಕ್ತಿಯ ಕಾಲಿಗೆ ಗುಂಡುಹಾರಿಸಿರುವ ಪೊಲೀಸರು, ಕೊನೆಗೂ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಂಜಾ ಸೇವನೆಗೆ ಅಡ್ಡಿಯಾಗಿದ್ದ ತನ್ನ ಸ್ವಂತ ಅಜ್ಜಿಯನ್ನೇ ಸೈಜು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಬುಧವಾರದಂದು ಸಂಜೆ ಶಿವಮೊಗ್ಗದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ನಡೆದಿತ್ತು.

ಆರೋಪಿ ಕಿಶೋರ ಎಂಬಾತ ಅಕ್ರಮವಾಗಿ ಗಾಂಜಾ ಸೇವನೆ ಮಾಡುತ್ತಿರುವದರ ಬಗ್ಗೆ ಆತನ ಅಜ್ಜಿ ಸುಶೀಲಮ್ಮಗೆ ಗೊತ್ತಾಗಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದರು. ಈ ಕುರಿತು ಪರಸ್ಪರರ ಮಧ್ಯೆ ಜಗಳವಾಗಿದೆ.

ಬಳಿಕ ಅಲ್ಲಿಯೇ ಇದ್ದ ಸೈಜು ಕಲ್ಲನ್ನು ಅಜ್ಜಿಯ ತಲೆ ಮೇಲೆ ಎತ್ತಿ ಹಾಕಿ ಕೊಲೆಗೈದಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೊಡ್ಡಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಬಳಿಕ ಪರಾರಿಯಾಗಿದ್ದ ಆರೋಪಿ ಕಿಶೋರ್‌ನ ಬಂಧನಕ್ಕೆ ಜಾಲ ಬೀಸಲಾಗಿತ್ತು.

ಬುಧವಾರ ರಾತ್ರಿಯಿಂದಲೇ ಆರೋಪಿಯ ಬಂಧನಕ್ಕೆ ನಗರದ ವಿವಿದೆಡೆ ಜಾಲಬೀಸಿದ್ದ ಪೊಲೀಸರಿಗೆ, ಗುರುವಾರ ಬೆಳಗಿನ ಜಾವ ವಾಜಪೇಯಿ ಬಡಾವಣೆಯಲ್ಲಿ ಅವಿತು ಕುಳಿತಿರುವ ಮಾಹಿತಿ ಸಿಕ್ಕಿದೆ. ತಡಮಾಡದ ಇನ್‌ಸ್ಪೆಕ್ಟರ್ ಸತ್ಯನಾರಾಯಣ್‌ ಮತ್ತವರ ತಂಡವು ಬಂಧನಕ್ಕೆ ತೆರಳಿದ್ದಾರೆ.

ಆರೋಪಿ ಕಿಶೋರ್‌ ಅಡಗಿದ್ದ ಜಾಗಕ್ಕೆ ತೆರಳಿದ ಪೊಲೀಸರಿಗೆ ಆತನ ಕೈಯಲ್ಲಿ ಲಾಂಗ್‌ ಇರುವದು ಕಂಡಿದೆ. ಹೀಗಾಗಿ ಶರಣಾಗಲು ತಿಳಿಸಿದ್ದಾರೆ.

ಆದರೆ ಆರೋಪಿ ಕಿಶೋರ್‌, ಲಾಂಗ್‌ನಿಂದ ಕಾನಸ್ಟೇಬಲ್‌ ಗಣೇಶ ಎಂಬುವವರ ಮೇಲೆ ದಾಳಿ ನಡೆಸಿದ್ದಾನೆ. ಆ ಕೂಡಲೇ ಗಾಳಿಯಲ್ಲಿ ಗುಂಡು ಹಾರಿಸಿದ ಇನ್‌ಸ್ಪೆಕ್ಟರ್ ಸತ್ಯನಾರಾಯಣ್‌ ಮತ್ತೊಮ್ಮೆ ಶರಣಾಗಲೂ ತಿಳಿಸಿದ್ದಾರೆ.

ಆದರೆ ಆರೋಪಿ ಕಿಶೋರ್‌, ಮತ್ತೆ ಹಲ್ಲೆ ಮಾಡಲು ಬರುತ್ತಿದ್ದಂತೆ ಆತನ ಕಾಲಿಗೆ ಗುಂಡು ಹಾರಿಸಿ, ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.

ಬಳಿಕ ಎಡಗಾಲಿಗೆ ಗುಂಡು ತಗುಲಿದ್ದ ಆರೋಪಿ ಕಿಶೋರ್‌ನನ್ನು ನಗರದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ ನಿಖಿಲ್‌, ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಪೊಲೀಸ್‌ ಸಿಬ್ಬಂದಿ ಹಾಗೂ ಆರೋಪಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Follow Us

Leave a Reply

Your email address will not be published. Required fields are marked *

Back to top button