Shivamogga

ಶಿವಮೊಗ್ಗ: ಆಗಸ್ಟ್ 2 ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ|ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ|ರಕ್ತದಾನ ಶಿಬಿರ ಆಯೋಜನೆ-ಹೆಚ್.ಯು.ವೈದ್ಯನಾಥ್

ಪತ್ರಿಕಾ ದಿನಾಚರಣೆಯನ್ನು ಕೇವಲ ಆಚರಣೆಗೆ ಮಾತ್ರ ಸೀಮಿತಗೊಳಿಸದೆ ಸಾಮಾಜಿಕ ಕಳಕಳಿಯೊಂದಿಗೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಹೆಚ್.ಯು. ವೈದ್ಯನಾಥ್ ತಿಳಿಸಿದರು.

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 2 ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ.

ಪತ್ರಿಕಾ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಹಾಗೂ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತರಿಗೆ ಹಾಗೂ ದತ್ತಿ ಪ್ರಶಸ್ತಿ ವಿಜೇತರಿಗೆ ಸನ್ಮಾನ ಹಾಗೂ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಜಿಲ್ಲಾ ಅಧ್ಯಕ್ಷ ಹೆಚ್.ಯು.ವೈದ್ಯನಾಥ್ ಹೇಳಿದರು.

ಶನಿವಾರದಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪತ್ರಿಕಾ ದಿನಾಚರಣೆಯನ್ನು ಕೇವಲ ಆಚರಣೆಗೆ ಮಾತ್ರ ಸೀಮಿತಗೊಳಿಸದೆ ಸಾಮಾಜಿಕ ಕಳಕಳಿಯೊಂದಿಗೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಹೆಚ್.ಯು. ವೈದ್ಯನಾಥ್ ತಿಳಿಸಿದರು.

ಬೆಳಿಗ್ಗೆ ನಡೆಯುವ ರಕ್ತದಾನ ಶಿಬಿರವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಎಚ್.ಪಿ. ಮದನ್‌ಗೌಡ ಚಾಲನೆ ನೀಡಲಿದ್ದಾರೆ.

ಪತ್ರಿಕಾ ದಿನಾಚರಣೆಯ ವೇದಿಕೆ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿ, ಪತ್ರಕರ್ತರಿಗೆ ಗೌರವ ಸಮರ್ಪಣೆ ಸಲ್ಲಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ವಿತರಿಸಲಿದ್ದು, ಪತ್ರಿಕೋದ್ಯಮದ ಇಂದಿನ ಸವಾಲುಗಳು ಹಾಗೂ ಭವಿಷ್ಯದ ಅವಕಾಶಗಳ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ನಿರ್ದೇಶಕರಾದ ಕೆ.ವಿ. ಶಿವಕುಮಾರ್ ಹಾಗೂ ಎನ್. ರವಿಕುಮಾರ್ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಯು. ವೈದ್ಯನಾಥ್ ವಹಿಸಲಿದ್ದಾರೆ.

ಕನ್ನಡಪ್ರಭದ ಹೊಳೆಹೊನ್ನೂರು ವರದಿಗಾರ ಅರಹತೊಳಲು ಕೆ. ರಂಗನಾಥ್, ಜೈ ಕರುನಾಡು ದಿನಪತ್ರಿಕೆ ಸಂಪಾದಕ ನಾಗರಾಜ್ ಕಲ್ಕೊಪ್ಪ, ಟಿವಿ 9 ಛಾಯಾಗ್ರಾಹಕ ರಘುಕುಮಾರ್, ಸೊರಬದ ವಿಜಯವಾಣಿ ವರದಿಗಾರ ಶಿವಪ್ಪ ಹಿತ್ಲೇರ್, ಭದ್ರಾವತಿಯ ಹಿರಿಯ ಪತ್ರಕರ್ತ ಟಿ.ಎಸ್. ಆನಂದ್ ಕುಮಾರ್, ತೀರ್ಥಹಳ್ಳಿಯ ಪತ್ರಕರ್ತ ಹಾಗೂ ವ್ಯಂಗ್ಯಚಿತ್ರಕಾರ ರಾಮಚಂದ್ರ ಕೊಪ್ಪಲು. ಶಿಕಾರಿಪುರದ ಜನಹೋರಾಟ ಪತ್ರಿಕೆ ವರದಿಗಾರ ಕೆ.ಹೆಚ್. ಹುಚ್ಚರಾಯಪ್ಪ, ಸಾಗರದ ಕನ್ನಡಪ್ರಭ ವರದಿಗಾರ ರಾಜೇಶ್ ಭಡ್ತಿ, ಹೊಸನಗರದ ಹಿರಿಯ ಪತ್ರಕರ್ತ ಪಿ.ಎನ್. ನರಸಿಂಹಮೂರ್ತಿ ಅವರಿಗೆ ಗೌರವ ಸಮರ್ಪಿಸಲಾಗುವುದು ಎಂದು ಹೆಚ್.ಯು. ವೈದ್ಯನಾಥ್ ತಿಳಿಸಿದರು.

ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ ಪಡೆದ ಶಿವಮೊಗ್ಗದ ಹೊಸದಿಗಂತ ಪತ್ರಿಕೆಯ ಸ್ಥಾನಿಕ ಸಂಪಾದಕ ವಾದಿರಾಜ ಕಮರೂರು, ಭದ್ರಾವತಿಯ ಹಿರಿಯ ಪತ್ರಕರ್ತ ಕಣ್ಣಪ್ಪ, ಬೆಂಗಳೂರಿನ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಶ್ರೀಕಾಂತ ಭಟ್ ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು ಎಂದರು.

ಶಿಕ್ಷಣ, ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಾದ ಧ್ರುವ ಹೆಗಡೆ, ಭಾವನಾ ಎಸ್, ಪ್ರೇರಣಾ ಕೆ. ರಾವ್, ಡಾ. ಕೆ.ಎಸ್. ಲಲಿತೇಶ್ವರಿ, ಎನ್. ಸಾನ್ವಿ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಎ.ಎನ್.ರಕ್ಷಾ ರಾಜ್ಯ ಮಟ್ಟದ ಪತ್ರಿಭಾ ಪುರಸ್ಕಾರ ವಿತರಿಸಲಾಗುವುದು ಎಂದು ಹೇಳಿದರು.

ಪತ್ರಿಕಾ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರಕ್ಕೆ ರೋಟರಿ ರಕ್ತನಿಧಿ ಕೇಂದ್ರ, ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಕೇಂದ್ರ, ಆಶಾಜ್ಯೋತಿ ರಕ್ತನಿಧಿ ಕೇಂದ್ರ ಹಾಗೂ ನಗರ ವಿವಿಧ ಸಾಮಾಜಿಕ , ಸಾಂಸ್ಕೃತಿಕ, ಶೈಕ್ಷಣಿಕ ಸಂಘ-ಸಂಸ್ಥೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಸಹಕಾರ ನೀಡಿದ್ದಾರೆ.

ಪತ್ರಕರ್ತರು, ಸಾರ್ವಜನಿಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಕೆ.ಸತ್ಯನಾರಾಯಣ, ಕೆ.ಎಸ್.ಹುಚ್ಚರಾಯಪ್ಪ, ಪ್ರಧಾನ ಕಾರ್ಯದರ್ಶಿ ಆರ್.ಎಸ್.ಹಾಲಸ್ವಾಮಿ, ಸದಸ್ಯ ನಾಗರಾಜ್ ಶೆಣೈ, ಕೆ.ಆರ್.ಸೋಮನಾಥ್ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button