ಡಿಸಿ ಪ್ರಭುಲಿಂಗ ಕವಳಿಕಟ್ಟಿ ಹಠಾತ್ ವರ್ಗಾವಣೆ|ಮುಳುವಾಯ್ತಾ ದಸರಾ ಅಂಬಾರಿ ಎಡವಟ್ಟು? ನೂತನ ಡಿಸಿಯಾಗಿ ಪ್ರಕಾಶ್ ಜಿಟಿ ನಿಟ್ಟಳಿ ನೇಮಕ
ತಮ್ಮ ಸರಳ ಸ್ವಭಾವ, ಶಾಂತಚಿತ್ತತೆ, ಸದಾ ನಗುಮುಖದೊಂದಿಗೆ ಇರುತ್ತಿದ್ದ ಡಿಸಿ ಕವಳಿಕಟ್ಟಿ ಅವರು ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಸೇರಿದಂತೆ ಸಿಬ್ಬಂದಿ ವರ್ಗಕ್ಕೆ ಅಚ್ಚುಮೆಚ್ಚು ಆಗಿದ್ದರು.

ಶಿವಮೊಗ್ಗ: ಶುಕ್ರವಾರ ಸಂಜೆವರೆಗೆ ಆಡಳಿತಾತ್ಮಕ ಕಾರ್ಯಕಲಾಪಗಳಲ್ಲಿ ಭಾಗಿಯಾಗಿದ್ದ ದಕ್ಷ ಜಿಲ್ಲಾಧಿಕಾರಿ ಸರಳ, ಸಜ್ಜನ ಅಧಿಕಾರಿ ಎಂದೇ ಹೆಸರುಗಳಿಸಿದ್ದ ಪ್ರಭುಲಿಂಗ ಕವಳಿಕಟ್ಟಿಯವರನ್ನು ಹಠಾತ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಏಕಾಏಕಿ ಬಂದ ಆದೇಶ ಡಿಸಿ ಕವಳಿಕಟ್ಟಿ ಅವರಿಗೂ ಸಹ ಶಾಕ್ ನೀಡಿದೆ. ಕಳೆದ ಜನೆವರಿಯಲ್ಲಿ ಡಿಸಿ ಆಗಿ ಅಧಿಕಾರ ವಹಿಸಿಕೊಂಡಿದ್ದ ವರ್ಷ ತುಂಬುವ ಮುನ್ನವೇ ಎತ್ತಂಗಡಿ ಮಾಡಲಾಗಿದೆ.

ತಮ್ಮ ಸರಳ ಸ್ವಭಾವ, ಶಾಂತಚಿತ್ತತೆ, ಸದಾ ನಗುಮುಖದೊಂದಿಗೆ ಇರುತ್ತಿದ್ದ ಡಿಸಿ ಕವಳಿಕಟ್ಟಿ ಅವರು ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಸೇರಿದಂತೆ ಸಿಬ್ಬಂದಿ ವರ್ಗಕ್ಕೆ ಅಚ್ಚುಮೆಚ್ಚು ಆಗಿದ್ದರು.
ದಸರಾ ಅಂಬಾರಿ ಎಡವಟ್ಟು|
ಡಿಸಿ ವರ್ಗಾವಣೆಗೆ ಕಾರಣವಾಯಿತಾ?
ಯಾವುದೇ ವಿವಾದಗಳಿಗೆ ಆಹಾರವಾಗದೇ ಸರಳ ರೀತಿಯಲ್ಲಿ ದೈನಂದಿನ ಆಡಳಿತದಿಂದ ಜನಾನುರಾಗಿಯಾಗಿದ್ದ ಡಿಸಿ ಪ್ರಭುಲಿಂಗ್ ಕವಳಿಕಟ್ಟಿ ಅವರ ಹಠಾತ್ ವರ್ಗಾವಣೆ ಸಾರ್ವಜನಿಕರಲ್ಲಿಯು ಬೇಸರ ಮೂಡುವಂತೆ ಮಾಡಿದೆ ಅಲ್ಲದೇ ಆಶ್ಚರ್ಯ ಉಂಟು ಮಾಡಿದೆ.

ಡಿಸಿ ಕವಳಿಕಟ್ಟಿ ಅವರ ಹಠಾತ್ ವರ್ಗಾವಣೆ ಹಿಂದೆ ಇತ್ತೀಚೆಗೆ ದಸರಾ ಉತ್ಸವದ ವೇಳೆ ನಡೆದ ಅಂಬಾರಿ ಬಿದ್ದು ಆನೆ ದಿಕ್ಕಾಪಾಲಾಗಿ ಓಡಿದ ಘಟನೆ ಕಾರಣ ಎಂದು ಹೇಳಲಾಗುತ್ತಿದೆ.
ದಸರಾ ಅಂಬಾರಿ ವಿಷಯದಲ್ಲಿ ಡಿಸಿ ಅವರು ಸರಿಯಾಗಿ ಕಾರ್ಯನಿರ್ವಹಿಸದೇ ಇರುವದು ಅಂದಿನ ಎಡವಟ್ಟಿಗೆ ಕಾರಣವಾಯಿತು.
ಈ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಈಗ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಹಠಾತ್ ವರ್ಗಾವಣೆ ಮಾಡಲಾಗಿರುವ ಪ್ರಭುಲಿಂಗ್ ಕವಳಿಕಟ್ಟಿ ಅವರನ್ನು ಬೆಂಗಳೂರಿನ ಶಾಲಾಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ನಿಯುಕ್ತಿ ಮಾಡಲಾಗಿದೆ.

ಇದೇ ವೇಳೆ ಕವಳಿಕಟ್ಟಿ ಅವರ ಸ್ಥಾನಕ್ಕೆ ಈವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯಮಾಪನ ಮಂಡಳಿ ಅಧ್ಯಕ್ಷರಾಗಿದ್ದ ಪ್ರಕಾಶ್ ಜಿಟಿ ನಿಟ್ಟಳಿಯವರನ್ನು ನೇಮಿಸಲಾಗಿದೆ.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ






