Karnataka

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತದಲ್ಲಿ ಅಮಾಯಕರ ಸಾವು|ಬಳ್ಳಾರಿ ಬ್ಯಾನರ್‌ ಗಲಾಟೆ ತಡೆಯುವಲ್ಲಿ ಪೊಲೀಸರು ವಿಫಲ-ಸಿಎಂ ಸಿದ್ದರಾಮಯ್ಯ ಬಹಿರಂಗ ಅಸಮಾಧಾನ!

ಪೊಲೀಸರು ಜಾಗರೂಕರಾಗಿದ್ದರೆ ಅನೇಕ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟ ಸಿಎಂ, ಕೆಲವು ಪೊಲೀಸ್ ಠಾಣೆಗಳಲ್ಲಿ ಕೆಲವು ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣಕ್ಕೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆರೋಪಿಸಿದರು.

ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ಅಮಾಯಕರು ಬಲಿಯಾಗುವುದನ್ನು ತಪ್ಪಿಸಲು ಪೊಲೀಸರಿಂದ ಸಾಧ್ಯವಿತ್ತು ಎಂದು ಮೊದಲ ಬಾರಿಗೆ ಪೊಲೀಸ್‌ ಇಲಾಖೆಯ ವೈಫಲ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಅದೇ ರೀತಿ ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಸಹ ಪೊಲೀಸರು ಮುಂಜಾಗರೂಕತೆ ವಹಿಸಿದ್ದರೇ ಗಲಭೆಯನ್ನು ತಪ್ಪಿಸಬಹುದಾಗಿತ್ತು ಎಂದು ತಿಳಿಸಿದ್ದಾರೆ.

ಶನಿವಾರದಂದು ಬೆಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರ ಕಚೇರಿಯಲ್ಲಿ ಆಯೋಜಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ‌ ಸಿಎಂ ಮಾತನಾಡುತ್ತಿದ್ದರು.

ಅಪರಾಧವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಕಳೆದ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ ಭಾಗಿಯಾಗಿರುವುದು ನಾಚಿಕೆಗೇಡಿನ ವಿಷಯ ಎಂದು ಪೊಲೀಸರ ವಿರುದ್ದ ಹರಿಹಾಯ್ದರು.

ಪೊಲೀಸರು ಜಾಗರೂಕರಾಗಿದ್ದರೆ ಅನೇಕ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟ ಸಿಎಂ, ಕೆಲವು ಪೊಲೀಸ್ ಠಾಣೆಗಳಲ್ಲಿ ಕೆಲವು ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣಕ್ಕೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆರೋಪಿಸಿದರು.

ಕೊಲೆ, ಸುಲಿಗೆ, ಢಕಾಯಿತಿ, ದರೋಡೆ ಪ್ರಕರಣಗಳು ಕಳೆದ ಒಂದು ವರ್ಷದಲ್ಲಿ ಕಡಿಮೆಯಾಗಿದೆ. ಆದರೆ ಸೈಬರ್ ಅಪರಾಧ, ಡ್ರಗ್ಸ್ ಚಟುವಟಿಕೆಗಳು ಹೆಚ್ಚಾಗಿದ್ದು, ಅದನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಇನ್ನಷ್ಟು ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಕರೆ ನೀಡಿದರು.

ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ರಕ್ಷಣೆಯನ್ನು ಒದಗಿಸಿದೆ. ಕಾನೂನು ಎಲ್ಲರಿಗೂ ಒಂದೇ. ಯಾರು ತಪ್ಪು ಮಾಡಿದರೂ ಅದು ತಪ್ಪೇ. ಬಲಾಢ್ಯರು, ಸಮಾಜ ಘಾತುಕ ಶಕ್ತಿಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು ಎಂದು ಸಿಎಂ ಕಿವಿ ಮಾತು ಹೇಳಿದರು.

ದುರ್ಬಲರು, ಪರಿಶಿಷ್ಟ ಜಾತಿ, ವರ್ಗದ ಜನರು, ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ ಎಲ್ಲರ ಹೊಣೆ. ದುರ್ಬಲರು ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಒಳಗಾಗಬಾರದು. ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಸೂಚಿಸಿದರು.

ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡುವ ಗುರುತರವಾದ ಕಾರ್ಯವನ್ನು ರಾಜ್ಯದ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಮಾಡುತ್ತಿದೆ.

ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವುದು, ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ತಹಶೀಲ್ದಾರ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಆ ತಾಲೂಕಿನಲ್ಲಿ ಜನರು ನೆಮ್ಮದಿಯಿಂದ ಇರಲು ಸಾಧ್ಯವಿದೆ.

ಅದೇ ರೀತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಸಿಇಒ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಆ ಜಿಲ್ಲೆಯ ಜನರು ನೆಮ್ಮದಿಯಿಂದ ಇರಲು ಸಾಧ್ಯ ಎಂದರು.

ಆದರೆ ನಮ್ಮ ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯನ್ನು ಖಾತ್ರಿಪಡಿಸುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ ಎಂದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ಕಳೆದ ವರ್ಷ ಶೇ.3ರಷ್ಟಿತ್ತು ಈಗ ಶೇ.12ಕ್ಕೆ ಸುಧಾರಿಸಿದ್ದು, ಇದನ್ನು ಇನ್ನಷ್ಟು ಉತ್ತಮಪಡಿಸಬೇಕಿದೆ ಎಂದು ಹೇಳಿದರು.

ಜೈಲುಗಳ ಅವ್ಯವಸ್ಥೆ ಪ್ರಕರಣಗಳು, ಮಾದಕ ವಸ್ತು ಜಾಲ ನಿಯಂತ್ರಣದಲ್ಲಿ ಯಾವುದೇ ಲೋಪವನ್ನು ಸಹಿಸಲು ಸಾಧ್ಯವಿಲ್ಲ. ಮಾದಕ ವಸ್ತು ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಿನ ಅಧಿವೇಶದನಲ್ಲಿ ಹೊಸ ಕಾನೂನು ಜಾರಿಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಇದೇ ರೀತಿ ಸೈಬರ್ ಅಪರಾಧಗಳು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಬೇಕಿದೆ.

ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಅಭಿವೃದ್ಧಿ ಪರಸ್ಪರ ಪೂರಕವಾಗಿವೆ. ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಬಂಡವಾಳ ಹೂಡಿಕೆ ಹೆಚ್ಚಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಒಳಾಡಳಿತ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಬಿ.ಬಿ.ಕಾವೇರಿ ಉಪಸ್ಥಿತರಿದ್ದರು.

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button