CrimeDistrictKarnatakaShivamogga

ಶಿವಮೊಗ್ಗ: ಕೇಂದ್ರದ ಮತದಾರರ ತೀವ್ರ ಪರಿಷ್ಕರಣೆ ಕಾರ್ಯ|ಒತ್ತಡ ತಾಳಲಾರದೆ ನೇಣಿಗೆ ಶರಣಾದ ಕರ್ನಾಟಕದ ಮೊದಲ BLO?|ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಶಿಕ್ಷಕ ಧನಂಜಯ್‌..

ಬೆಳಿಗ್ಗೆ ಶಾಲೆಗೆ ಆಗಮಿಸಿದ್ದ ಶಿಕ್ಷಕ ಧನಂಜಯ್‌, ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ವಿರಾಮದ ಅವಧಿಯಲ್ಲಿ ಕೊಠಡಿಯಿಂದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದರು ಎಂದು ಹೇಳಲಾಗಿದೆ. ದಾಖಲೆ ಬರೆಯುವ ಕೆಲಸವಿದೆ ಎಂದು ಹೇಳಿ ಬಾಗಿಲು ಕಿಟಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಮೊಗ್ಗ: ಕೇಂದ್ರ ಸರ್ಕಾರದ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ (SIR) ತೊಡಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ಶಾಲೆಯ ಕೊಠಡಿಯಲ್ಲಿಯೇ ನೇಣಿಗೆ ಶರಣಾದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳೂರು ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕ 51 ವಯಸ್ಸಿನ ಧನಂಜಯ ಎಂದು ಗುರುತಿಸಲಾಗಿದ್ದು, ಇವರು ಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಶಿಕಾರಿಪುರ ತಾಲ್ಲೂಕಿನ ಜೀನಹಳ್ಳಿ ಗ್ರಾಮದ ನಿವಾಸಿ ಆಗಿದ್ದ ಶಿಕ್ಷಕ ಧನಂಜಯ, ಹೊನ್ನಾಳಿಯಲ್ಲಿ ವಾಸವಾಗಿದ್ದರು. ಎಂದಿನಂತೇ ಮಂಗಳವಾರದಂದು ತಾವು ಕಾರ್ಯನಿರ್ವಹಿಸುವ ಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳಗ್ಗೆ ಆಗಮಿಸಿದ್ದರು.

ಸಾಂದರ್ಭಿಕ ಚಿತ್ರ (AI)

ಶಾಲೆಗೆ ಆಗಮಿಸಿದ್ದ ಶಿಕ್ಷಕ ಧನಂಜಯ್‌, ವಿದ್ಯಾರ್ಥಿಗಳಿಗೆ ಪಾಠ ಸಹ ಮಾಡಿದ್ದರು. ವಿರಾಮದ ಅವಧಿಯಲ್ಲಿ ಕೊಠಡಿಯಿಂದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದ ಅವರು, ದಾಖಲೆ ಬರೆಯುವ ಕೆಲಸವಿದೆ ಎಂದು ಹೇಳಿ ಬಾಗಿಲು ಕಿಟಕಿ ಹಾಕಿಕೊಂಡು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಾಲೆಯ ವಿದ್ಯಾರ್ಥಿಗಳು ಕಟ್ಟೆಯ ಮೇಲೆ ಕುಳಿತಿರುವುದನ್ನು ಗಮನಿಸಿದ ಇತರೆ ಶಿಕ್ಷಕರು ಬಂದು ಪ್ರಶ್ನಿಸಿದಾಗ, ಧನಂಜಯ್‌ ಮೇಷ್ಟ್ರರು ಒಳಗಿದ್ದಾರೆ ಎಂಬ ಉತ್ತರ ಬಂದಿದೆ.

ಬಳಿಕ ಶಿಕ್ಷಕರು, ಕೊಠಡಿ ಬಳಿ ಬಂದು ಕಿಟಕಿ ತೆಗೆದಾಗ, ಧನಂಜಯ್‌ ಅವರು ನೇಣು ಹಾಕಿಕೊಂಡಿರುವದು ಕಾಣಿಸಿದೆ. ಕೂಡಲೇ ಗ್ರಾಮಸ್ಥರೊಂದಿಗೆ ಸೇರಿ ಬಾಗಿಲು ಒಡೆದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ ಎಂದು ಧನಂಜಯ್‌ ಅವರ ಸಹೋದ್ಯೋಗಿ ಶಿಕ್ಷಕರು ತಿಳಿಸಿದ್ದಾರೆ.

ಮಂಗಳವಾರದಂದು ಶಾಲೆಗೆ ಬರುವ ಮುನ್ನ ಶಿಕ್ಷಕ ಧನಂಜಯ್‌ ಅವರು, ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ (SIR) ನಿರ್ವಹಿಸಿ ನಂತರ ಶಾಲೆಗೆ ಆಗಮಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಒಂದೆಡೆ ಶಾಲೆಯಲ್ಲಿ ಪಾಠ ಮಾಡಬೇಕಾದ ಅನಿವಾರ್ಯತೆ ಇದ್ದರೇ ಇನ್ನೊಂದೆಡೆ ಮತದಾರರ ತೀವ್ರ ಪರಿಷ್ಕರಣೆ ಕಾರ್ಯ ಅವರಿಗೆ ಮಾನಸಿಕವಾಗಿ ತೀವ್ರ ಒತ್ತಡ ತಂದಿತ್ತು ಎನ್ನಲಾಗಿದೆ.

ಶಿಕ್ಷಕ ಧನಂಜಯ್‌ ಅವರಿಗೆ ನೀಡಲಾಗಿದ್ದ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಕೆಲಸದಲ್ಲಿ ದಿನಕ್ಕೆ ಇಂತಿಷ್ಟು ಮಾಡುವಂತೇ ʼಟಾರ್ಗೆಟ್‌ʼ ನೀಡಿದ್ದು ಧನಂಜಯ್‌ ಅವರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡಿತ್ತು ಎಂದು ಸ್ವತಃ ಅವರ ಪತ್ನಿ ಆಶಾ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಾರೇ, ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದ (SIR) ಒತ್ತಡದಿಂದ ಬಿಎಲ್‌ಓ ಗಳ ಆತ್ಮಹತ್ಯೆ ಪ್ರಕರಣಗಳು ತಿಂಗಳ ಹಿಂದೆ ಉತ್ತರಪ್ರದೇಶದಲ್ಲಿ ನಡೆದಿದ್ದರ ಬಗ್ಗೆ ವರದಿಯಾಗಿದ್ದವು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ವಿಷಯದ ಗಂಭೀರತೆಯನ್ನು ವೇದಿಕೆಗಳಲ್ಲಿ ಪ್ರಸ್ತಾಪಿಸಿ ಜನಾಂದೋಲನ ನಡೆಸಿದ್ದರು.

ಅಲ್ಲದೇ ಬಿಎಲ್‌ಓ ಗಳ ಆತ್ಮಹತ್ಯೆಗೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದ (SIR) ಒತ್ತಡವೇ ಕಾರಣ ಎಂದು ಆರೋಪಿಸಿದ್ದರು.

ಈಗ ಈ ಆರೋಪಕ್ಕೆ ಇಂಬು ಕೊಡುವಂತೆ ಕರ್ನಾಟಕದಲ್ಲಿ ಮೊದಲ ಬಿಎಲ್‌ಓ ಬಲಿಯಾಗಿದೆ. ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.

Follow Us

Leave a Reply

Your email address will not be published. Required fields are marked *

Back to top button