Shivmogga: ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು-ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಸೂಚನೆ..
75 ವರ್ಷ ತುಂಬಿದ ವೃದ್ದರಿಗೆ ಅವರ ಮನೆ ಬಾಗಿಲಿಗೆ ಪಡಿತರ ತಲುಪಿಸಬೇಕು. ಅನ್ನಸುವಿಧಾ ಯೋಜನೆ ಜಾರಿಗೆ ಬಂದು 3 ತಿಂಗಳು ಆಗಿದ್ದು ಜಿಲ್ಲೆಯಲ್ಲಿ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಮೊಗ್ಗ: ಆಹಾರ ಭದ್ರತಾ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ನಾಲ್ಕು ದಿನಗಳ ಜಿಲ್ಲಾ ಭೇಟಿ ಕೈಗೊಂಡಿದ್ದು, ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಮಂಗಳವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಹಿಂದೆ ಆಹಾರದ ಕೊರತೆ ಇತ್ತು. ಇದೀಗ ಕೊರತೆ ಆ ಇಲ್ಲ, ಆಹಾರ ನಮ್ಮ ಹಕ್ಕಾಗಿದ್ದು ಆಹಾರ ಭದ್ರತೆ ಒದಗಿಸಲಾಗಿದೆ ಎಂದರು.
ಆಹಾರ ಭದ್ರತಾ ಕಾಯ್ದೆಯು ಕಾನೂನಾತ್ಮಕ ಭದ್ರತೆ ನೀಡಿದ್ದು ಸರ್ಕಾರದ ವಿವಿಧ ಆಹಾರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಲಾಗುವುದು.
ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಎಲ್ಲಾ ಹಂತದಲ್ಲಿಯೂ ಕಾಯ್ದೆಯು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ನ್ಯಾಯಬೆಲೆ ಅಂಗಡಿಗಳ ಅಮಾನತಿಗೆ ಸೂಚನೆ|
ಶಿವಮೊಗ್ಗ ನಗರದಲ್ಲಿ ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಹಲವಾರು ಲೋಪದೋಷಗಳು ಕಂಡು ಬಂದವು. ನ್ಯಾಯಬೆಲೆ ಅಂಗಡಿಗೆ ನಿಗದಿತ ವೇಳೆಯೊಳಗೆ ಪಡಿತರ ತಂದು ವಿತರಿಸದೇ ಇದ್ದ ಹಾಗೂ ಇತರೆ ಲೋಪದೋಷ ಕಂಡು ಬಂದ ಅಶೋಕ ನಗರದ ಮತ್ತು ಶೇಷಾದ್ರಿಪುರಂ ಹಾಗೂ ಅಣ್ಣಾನಗರದಲ್ಲಿರುವ ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಲು ಅವರು ನಿರ್ದೇಶನ ನೀಡಿದರು.
ಗುತ್ಯಪ್ಪ ಕಾಲೋನಿ ಸೇರಿದಂತೆ ಎರಡು ನ್ಯಾಯಬೆಲೆ ಅಂಗಡಿಗಳಲ್ಲಿ ಲೋಪದೋಷ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದ ಅವರು, ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಕುರಿತು ಸಂಪೂರ್ಣವಾದ ಮಾಹಿತಿಯುಳ್ಳ ಫಲಕ ಅಳವಡಿಸುವಂತೆ ಸೂಚಿಸಲಾಗಿದೆಎಂದು ತಿಳಿಸಿದರು.
75 ವರ್ಷ ತುಂಬಿದ ವೃದ್ದರಿಗೆ ಅವರ ಮನೆ ಬಾಗಿಲಿಗೆ ಪಡಿತರ ತಲುಪಿಸಬೇಕು. ಅನ್ನಸುವಿಧಾ ಯೋಜನೆ ಜಾರಿಗೆ ಬಂದು 3 ತಿಂಗಳು ಆಗಿದ್ದು ಜಿಲ್ಲೆಯಲ್ಲಿ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಮಾರುತಿ ಎಂ ದೊಡ್ಡಲಿಂಗಣ್ಣವರ, ಸುಮಂತ ರಾವ್, ಕೆ ಎಸ್ ವಿಜಯಲಕ್ಷ್ಮೀ ಹಾಜರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







