DistrictEducationShivamogga

ಜೂನ್‌ 1ರಂದು ಶಿವಮೊಗ್ಗಕ್ಕೆ ಸಿಎಂ ಸಿದ್ದರಾಮಯ್ಯ|ಕೆಪಿಎಸ್ ಶಾಲೆಗೆ ಶಂಕುಸ್ಥಾಪನೆ|ಪೂರ್ವಸಿದ್ದತೆ ಪರಿಶೀಲನೆ ನಡೆಸಿದ ಮಧು ಬಂಗಾರಪ್ಪ

ರಾಜ್ಯದಲ್ಲಿ 800 ಕೆಪಿಎಸ್ ಶಾಲೆಗಳನ್ನು ಶಿಕ್ಷಣ ಇಲಾಖೆ ಹಾಗೂ 200 ಶಾಲೆಗಳನ್ನು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನಿರ್ಮಾಣವಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಇದೇ ಜೂನ್‌ 01 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಯ ಅಡಿಗಲ್ಲು ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ‘ಅಲ್ಲಮ ಪ್ರಭು ಮೈದಾನ’ ಉನ್ನತ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಅವರು, ಕಾರ್ಯಕ್ರಮದ ಪೂರ್ವಸಿದ್ಧತೆಗಳ ಕುರಿತು ಚರ್ಚೆ ನಡೆಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿರುವ ಈ ಬೃಹತ್ ಕಾರ್ಯಕ್ರಮದ ವೇದಿಕೆ ನಿರ್ಮಾಣ, ಸಾರ್ವಜನಿಕ ಸೌಕರ್ಯ, ಟ್ರಾಫಿಕ್ ದಟ್ಟಣೆ ಹಾಗೂ ಭದ್ರತಾ ವ್ಯವಸ್ಥೆಗಳು ಯಾವುದೇ ಲೋಪವಿಲ್ಲದೆ ಅಚ್ಚುಕಟ್ಟಾಗಿ ಮೂಡಿಬರಲು ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ, ಸೂಕ್ತ ಸಲಹೆ ಮತ್ತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕರ್ನಾಟಕದಲ್ಲಿನ ಕೆಪಿಎಸ್ ಶಾಲೆಯಿಂದ ಪ್ರೇರಣೆಗೊಂಡು ತೆಲಂಗಾಣದಲ್ಲಿಯು ಟಿಪಿಎಸ್ ಶಾಲೆ ಆರಂಭಿಸಲು ಅಲ್ಲಿನ ಸರ್ಕಾರ ಚಿಂತಿಸಿದ್ದು, ನಮ್ಮಿಂದ ಮಾಹಿತಿ ಪಡೆದುಕೊಂಡಿದೆ ಎಂದು ಹೇಳಿದರು.

ಇಡೀ ದೇಶಕ್ಕೇ ಮಾದರಿಯಾದ ಶಿಕ್ಷಣ ಗ್ಯಾರಂಟಿಯನ್ನ ರಾಜ್ಯ ಸರ್ಕಾರ ನೀಡುತ್ತಿದೆ. ಕೆಪಿಎಸ್ ಶಾಲೆ ದೇಶದಲ್ಲೇ ತನ್ನದೇ ಆದ ಬ್ರಾಂಡ್ ಸೃಷ್ಟಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತೆಲಂಗಾಣ ಸರ್ಕಾರ ನಮ್ಮ ಕೆಪಿಎಸ್ ಮಾದರಿಯಿಂದ ಸ್ಪೂರ್ತಿಯಾಗಿರುವುದು ಹೆಮ್ಮೆಯ ವಿಷಯ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

7 ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ಜೂನ್ 01 ರಂದು ಶಿವಮೊಗ್ಗದಲ್ಲಿ ನೆರವೇರಲಿದೆ ಎಂದು ಹೇಳಿದ ಸಚಿವರು, ಬಳಿಕ ಉಳಿದ ಶಾಲೆಗಳ‌ ಡಿಪಿಆರ್ ಸಿದ್ದಗೊಳ್ಳಲಿದೆ ಎಂದರು.

ರಾಜ್ಯದಲ್ಲಿ 800 ಕೆಪಿಎಸ್ ಶಾಲೆಗಳನ್ನು ಶಿಕ್ಷಣ ಇಲಾಖೆ ಹಾಗೂ 200 ಶಾಲೆಗಳನ್ನು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನಿರ್ಮಾಣವಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

3.5 ಕೋಟಿರೂ. ವೆಚ್ಚದಲ್ಲಿ 1000 ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳನ್ನು ಇಡಲಾಗುವುದು ಎಂದರು.

ತುಮಕೂರಿನಲ್ಲಿ‌ ಇತ್ತೀಚೆಗೆ ಮುಖ್ಯಮಂತ್ರಿಗಳು ರೂ.600 ಕೋಟಿ ಕಾಮಗಾರಿ ಘೋಷಣೆ ಮಾಡಿದ್ದು, ಅದೇ ರೀತಿಯಲ್ಲಿ ಇಲ್ಲಿಯೂ ಸಹ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು.

ಜೂನ್ 1 ರಂದು ಸಿಎಂ ಡಿಸಿಎಂ ಜೊತೆಗೂಡಿ ಶಾಲಾ ಮಕ್ಕಳೊಂದಿಗೆ ಊಟ ಸವಿಯಲಿದ್ದಾರೆಂದು ಸಚಿವ ಮಧುಬಂಗಾರಪ್ಪ ತಿಳಿಸಿದರು. ಇದೇ ವೇಳೆ 600ಕ್ಕು ಹೆಚ್ಚು ಅಂಕ ಪಡೆದ 867 ಎಸ್ಸೆಎಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ 12 ಕೆಪಿಎಸ್ ಶಾಲೆಗಳಿವೆ.

ಇದೀಗ ಹೊಸದಾಗಿ 19 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು ಎಂದರು. ಹಾಗೂ ಖಾಸಗಿ ಸಂಸ್ಥೆಯೊಂದು ರೂ.12 ಕೋಟಿಗಳನ್ನು ಶಾಲೆಗಳ ಉನ್ನತೀಕರಣಕ್ಕೆ ಸಿಎಸ್ಆರ್ ನಿಧಿಯನ್ನು‌ ಘೋಷಿಸಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇತ್ತೀಚೆಗೆ ಜಿಲ್ಲೆಯಲ್ಲಿ ಬಿರುಗಾಳಿ‌ ಮತ್ತು ಮಳೆಗೆ ಹೊಳೆಹೊನ್ನೂರು ವ್ಯಾಪ್ತಿಯ ಗ್ರಾಮಗಳು‌ ಮತ್ತು ಇತರೆಡೆ ಅಡಿಕೆ ಬೆಳೆಗಳು ಹಾನಿಗೀಡಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತರಿಗೆ ಪರಿಹಾರ ನೀಡಲು ಮಾನ್ಯ ಮುಖ್ಯಮಂತ್ರಿಗಳ ಬಳಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು

ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಚಂದ್ರಭೂಪಾಲ್, ಮಾಜಿ ಸಂಸದ ಆಯನೂರು‌ ಮಂಜುನಾಥ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಓ ಎನ್.ಹೇಮಂತ್, ಎಸ್‌ಪಿ ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಮತ್ತಿತರರು ಹಾಜರಿದ್ದರು.

Follow Us

Leave a Reply

Your email address will not be published. Required fields are marked *

Back to top button