ಶಿವಮೊಗ್ಗದಲ್ಲಿ ಭುಗಿಲೇದ್ದ ಕಾಂಗ್ರೆಸ್ ಭಿನ್ನಮತ|ಮಧು ಬಂಗಾರಪ್ಪ ಬೆಂಬಲಿಗರ ಮೇಲೆ ಲಂಚದ ಆರೋಪ|ಟಿಕೆಟ್ ನೀಡದಿದ್ದರೇ ಪಕ್ಷ ಬಿಡ್ತೇನೆ-ಹೆಚ್.ಎಸ್.ಸುಂದರೇಶ್
ಸೋನಿಯಾಗಾಂಧೀ, ರಾಹುಲ್ ಗಾಂಧಿಯವರನ್ನು ಬೈಯ್ದವರಿಗೆ ಕರೆದು ಮಂತ್ರಿಗಿರಿ ನೀಡಲಾಗಿದೆ ಎಂದು ಅಪರೋಕ್ಷವಾಗಿ ಮಧು ಬಂಗಾರಪ್ಪ ವಿರುದ್ದ ಹೆಚ್.ಎಸ್.ಸುಂದರೇಶ್ ಆರೋಪಿಸಿದರು.

ಶಿವಮೊಗ್ಗ: ಸಿಎಂ ಡಿಕೆ ಶಿವಕುಮಾರ್ ಜಿಲ್ಲೆಗೆ ಬಂದು ಹೋದ ಬೆನ್ನಲ್ಲೇ, ಬೂದಿ ಮುಚ್ಚಿದ ಕೆಂಡದಂತಿದ್ದ ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಳಗೊಳಗೆ ಕುದಿಯುತ್ತಿದ್ದ ಭಿನ್ನಮತ ಸ್ಪೋಟಗೊಂಡಿದೆ.
ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇರವಾಗಿ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪ ಹಾಗೂ ಅವರ ಬೆಂಬಲಿಗರ ದಬ್ಬಾಳಿಕೆ, ಪಕ್ಷಕ್ಕಾಗಿ ದುಡಿದ ಹಿರಿಯ ಕಾಂಗ್ರೆಸ್ಸಿಗರ ಕಡೆಗಣನೆ, ಇತ್ತೀಚೆಗೆ ಬಂದವರಿಗೆ ದೊಡ್ಡ ಸ್ಥಾನಮಾನ ಹುದ್ದೆಗಳು ನೀಡಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಶುದ್ದೀಕರಣವಾಗಬೇಕು. ಪಕ್ಷಕ್ಕಾಗಿ ದುಡಿದವರಿಗೆ ಆಧ್ಯತೆ ನೀಡಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಮಾಡಿ ಒತ್ತಾಯಿಸುವುದಾಗಿ ಹೆಚ್.ಎಸ್.ಸುಂದರೇಶ್ ತಿಳಿಸಿದರು
ಶಿವಮೊಗ್ಗದಲ್ಲಿ ಬುಧವಾರದಂದು ಸುದ್ದಿಗೋಷ್ಠಿ ನಡೆಸಿದ ಅವರು ತಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ಸ್ವಜನ ಪಕ್ಷಪಾತ, ಮೂಲಕಾಂಗ್ರೆಸ್ಸಿಗರು ಪಕ್ಷಕ್ಕಾಗಿ ದುಡಿದ ಹಿರಿಯರ ಕಡೆಗಣನೆ ಹೆಚ್ಚಾಗಿದೆ ಎಂದು ಪ್ರಮುಖ ಸ್ವಪಕ್ಷೀಯ ನಾಯಕರ ವಿರುದ್ದ ಕಿಡಿಕಾರಿದರು.
ಸೋನಿಯಾಗಾಂಧೀ, ರಾಹುಲ್ ಗಾಂಧಿಯವರನ್ನು ಬೈಯ್ದವರಿಗೆ ಕರೆದು ಮಂತ್ರಿಗಿರಿ ನೀಡಲಾಗಿದೆ ಎಂದು ಅಪರೋಕ್ಷವಾಗಿ ಮಧು ಬಂಗಾರಪ್ಪ ವಿರುದ್ದ ಹೆಚ್.ಎಸ್.ಸುಂದರೇಶ್ ಆರೋಪಿಸಿದರು.
ಪಕ್ಷಕ್ಕಾಗಿ ತಾವು 40 ವರ್ಷಗಳಿಂದ ದುಡಿದಿದ್ದರೂ ಬೇಡದ ಕಾಡಾ ಅಧ್ಯಕ್ಷಗಿರಿ, ಕಿತ್ತೋದ ಸೂಡಾಗೆ ಅಧ್ಯಕ್ಷರನ್ನಾಗಿ ಮಾಡಿದರು.
ಹಿಂದೆಯೂ ಕೂಡ ಎಂಪಿ ಟಿಕೆಟ್ ನಿಕ್ಕಿಯಾಗಿದ್ದನ್ನು ತಪ್ಪಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯೋಗ್ಯತೆ ಇಲ್ಲವರಿಗೆಲ್ಲ ಎಂಎಲ್ಎ ಟಿಕೇಟ್ ಸಿಕ್ಕಿದೆಯೆಂದು ಬೇಸರ ಹೊರಹಾಕಿದರು.
ಇನ್ನು ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಕ್ಯಾಬಿನೇಟ್ ದರ್ಜೆ ಸ್ಥಾನಮಾನ ನೀಡಿರುವುದಕ್ಕೆ ಹೆಚ್.ಎಸ್.ಸುಂದರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನೂತನ ಜಿಲ್ಲಾಧ್ಯಕ್ಷ ಹೆಚ್ ಸಿ ಯೋಗೀಶ್ ಆಯ್ಕೆ ವಿಚಾರದ ಬಗ್ಗೆಯೂ ತೀವ್ರ ಅಸಮಾಧಾನ ತೋಡಿಕೊಂಡರು.
ಅದೇ ರೀತಿ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪ ಅವರ ಬೆಂಬಲಿಗರು, ಅಧಿಕಾರಿಗಳಿಗೆ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಹೆಚ್.ಎಸ್.ಸುಂದರೇಶ್ ಗಂಭೀರ ಆರೋಪ ಮಾಡಿದರು.

ತಮ್ಮ ಕಚೇರಿಗೂ ಬಂದು 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿದರು. ಈ ಬಗ್ಗೆ ಸಚಿವರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಅವರು ಗಮನಹರಿಸಲಿ ಎಂದರು.
ವಿದ್ಯಾರ್ಥಿ ದೆಸೆಯಿಂದಲೂ ಪಕ್ಷ ಸಂಘಟನೆಗಾಗಿ ಕೆಲಸಮಾಡಿರುವ ತಮಗೆ ಮುಂದಿನ ವಿಧಾನಸಭೆ ಚುನಾವಣೆ ವೇಳೆ ಶಿವಮೊಗ್ಗದಿಂದ ಟಿಕೇಟ್ ನೀಡಬೇಕು ಎಂದರು.
ಶಿಕಾರಿಪುರದಿಂದ ನಾಗರಾಜಗೌಡರಿಗೆ ಟಿಕೇಟ್ ಕೊಡದೇ ಬೇರೆಯವರಿಗೆ ನೀಡಬೇಕು ಎಂದು ಹೇಳಿದರು.
ಸಾಗರಿಂದ ಬೇಳೂರು ಗೋಪಾಲಕೃಷ್ಣ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ರವರಿಗೆ ಟಿಕೇಟ್ ನೀಡದೇ ಮಂಜುನಾಥಗೌಡರಿಗೆ ಟಿಕೇಟ್ ನೀಡಬೇಕು.
ಸೊರಬದಲ್ಲಿ ತಾವು ಹೇಳಿದ ಅಭ್ಯರ್ಥಿಗೆ ಟಿಕೇಟ್ ನೀಡಿದರೆ ಮಾತ್ರ ಪಕ್ಷದಲ್ಲಿ ಉಳಿಯುತ್ತೇವೆ ಇಲ್ಲದಿದ್ದರೆ ಪಕ್ಷ ತೊರೆಯುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಕಿಮ್ಮನೆ ರತ್ನಾಕರ್ ಈ ಹಿಂದೆಯೇ ತಮ್ಮದು ಕೊನೆ ಚುನಾವಣೆಯೆಂದು ಹೇಳಿ ಟಿಕೇಟ್ ಪಡೆದಿದ್ದರು ಈಗ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ ಯಾವುದೇ ಕಾರಣಕ್ಕೂ ಅವರಿಗೆ ಟಿಕೇಟ್ ಕೊಡಬಾರದೆಂದು ಹೇಳಿದರು.
ಇಬ್ಬರಿಗೆ ಮಂತ್ರಿಸ್ಥಾನ ನೀಡಿ!
ಭದ್ರಾವತಿ ಶಾಸಕ ಸಂಗಮೇಶ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರಿಗೆ ಮಂತ್ರಿ ಸ್ಥಾನ ನೀಡಿದರೆ ಪಕ್ಷಸಂಘಟನೆಗೆ ಬಲ ಬರುತ್ತದೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಲುವಾಗಿ ಈ ಬೇಡಿಕೆ ಮಹತ್ವದ್ದಾಗಿದ್ದು ಈ ಬಗ್ಗೆ ಶೀಘ್ರದಲ್ಲಿಯೇ ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಹೇಳಿದರು.
ತಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಶಾಸಕ ಸಂಗಮೇಶ್, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವು ಹಿರಿಯರು ಪಕ್ಷ ತೊರೆಯಲಿದ್ದೇವೆ ಎಂದು ಹೆಚ್.ಎಸ್.ಸುಂದರೇಶ್ ಸೂಚ್ಯವಾಗಿ ಹೇಳಿದರು.
ವರದಿ: ಸೌಮ್ಯ ಹೆಚ್.ಪಿ
ಬ್ಯರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







