Shivamoggaಶಿವಮೊಗ್ಗ ದಸರಾ-2026

ಸಿನಿ ದಸರಾಗೆ ಅದ್ದೂರಿ ಚಾಲನೆ|ಶಿವಮೊಗ್ಗ ಫಿಲಂ ಟೂರಿಸಂಗೆ ಸೂಕ್ತ ಸ್ಥಳ|ಫಿಲಂ ಸಿಟಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ-ರಾಜೇಂದ್ರಸಿಂಗ್ ಬಾಬು

ಪ್ರತಿಭಾವಂತರ ನೆಲೆಯಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಡೆಸುವ ಮೂಲಕ ಪ್ರಪಂಚದ ಭೂಪಟದಲ್ಲಿ ಶಿವಮೊಗ್ಗ ಕಾನ್ಸ್ ಕೇಂದ್ರವಾಗಬೇಕೆಂದು ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅಭಿಪ್ರಾಯಪಟ್ಟರು.

ಶಿವಮೊಗ್ಗ: ಚಿತ್ರಜಗತ್ತಿಗೆ ಬೇಕಾದಂತಹ, ಕಲೆ ಸಾಂಸ್ಕೃತಿಕ ಪರಿಸರ, ಪ್ರತಿಭಾವಂತರ ನೆಲೆಯಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಡೆಸುವ ಮೂಲಕ ಪ್ರಪಂಚದ ಭೂಪಟದಲ್ಲಿ ಶಿವಮೊಗ್ಗ ಕಾನ್ಸ್ ಕೇಂದ್ರವಾಗಬೇಕೆಂದು ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅಭಿಪ್ರಾಯಪಟ್ಟರು.

ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಿನಿ ಸಮಾಜ, ಬೆಳ್ಳಿಮಂಡಲ ಸಂಯುಕ್ತ ಆಶ್ರಯದಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ “ಸಿನಿ ದಸರಾ” ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾದ ಸಿನಿಮಾ ಚಿತ್ರ ನಿರ್ಮಾಣದ ಅವಧಿ, ದೇಶ, ವಿದೇಶಗಳು ಹೊರರಾಜ್ಯಗಳಲ್ಲಿ ನಿರ್ಮಿಸಲಾಗಿರುವ ಫಿಲಂ ಸಿಟಿಗಳು ಯಾವ ರೀತಿಯಲ್ಲಿ ಚಿತ್ರನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿವೆ ಎಂಬ ವಿಚಾರಗಳನ್ನು ರಾಜೇಂದ್ರಸಿಂಗ್ ಬಾಬು ಪ್ರಸ್ತಾಪಿದರು.

ಈ ಬಾರಿ ಮೈಸೂರಿನಲ್ಲಿ ಸಿನಿ ದಸರಾವನ್ನೇ ಕೈಬಿಡಲಾಗಿದೆ. ಆರ್ಥಿಕ ಕೊರತೆ ನೆಪಹೇಳಿ ಸಿನಿಮಾ ದಸರಾ ನಿಲ್ಲಿಸಲಾಗಿದೆ ಆದರೆ ಶಿವಮೊಗ್ಗದಲ್ಲಿ ಸಿನಿ ದಸರಾವನ್ನು ಇಷ್ಟೊಂದು ಅಚ್ಚುಕಟ್ಟಾಗಿ ನಡೆಸುತ್ತಿರುವುದಕ್ಕೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಅತ್ಯುತ್ತಮ ಫಿಲಂ ಸಿಟಿ ನಿರ್ಮಿಸಲು ಕಳೆದ 14 ವರ್ಷಗಳಿಂದ ನಡೆಸುತ್ತಿರುವ ಪ್ರಯತ್ನ ಈಡೇರಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಫಿಲಂಸಿಟಿ ನಿರ್ಮಾಣ ಯೋಜನೆಗಾಗಿ ಅಧಿಕಾರಿಗಳ ಹಿಂದೆ ನಿರಂತರ ಅಲೆದರೂ ಸಾಕಾರಗೊಂಡಿಲ್ಲ. ಇದೇ ವೇಳೆ ಸಿನಿಮಾಗಾಗಿ ವ್ಯಯಿಸಿದ್ದರೆ ಐದಾರು ಸಿನಿಮಾ ಮಾಡಬಹುದಾಗಿತ್ತು ಎಂದರು.

ಶಿವಮೊಗ್ಗದಲ್ಲಿ ಫಿಲಂ ಟೂರಿಸಂಗೆ ಅನುಕೂಲಕರ ಪರಿಸರವಿದೆ ಶರಾವತಿ ಹಿನ್ನೀರು, ಜೋಗ,ಶಿವಪ್ಪನಾಯಕ ಅರಮನೆ, ಸಿಗಂಧೂರು ಸೇತುವೆ,ಚಿತ್ರೀಕರಣಕ್ಕೆ ಬೇಕಾದ ಪ್ರಾಕೃತಿಕ ತಾಣಗಳಿವೆ ಇಲ್ಲಿ ಫಿಲಂಸಿಟಿ ನಿರ್ಮಿಸಿದರೆ ಸೂಕ್ತ ಎಂದು ಸಲಹೆ ನೀಡಿದರು.

ಮಾಲ್ಗುಡಿ ಡೇಸ್ ಖ್ಯಾತಿಯ ಮಾಸ್ಟರ್ ಮಂಜುನಾಥ್ ಮಾತನಾಡಿ, ಶಿವಮೊಗ್ಗದ ಮಣ್ಣು ಪರಿಸರದಲ್ಲೇ ಒಂದು ಮಾಂತ್ರಿಕತೆ ಅಡಗಿದೆ ಎಂದರು.

ಹೀಗಾಗಿಯೇ 40 ವರ್ಷ ಕಳೆದರೂ ಮಾಲ್ಗುಡಿ ಡೇಸ್ ಚಿತ್ರವಾಗಲಿ, ಧಾರಾವಾಹಿಯಾಗಲಿ ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಪೋಷಕ ನಟಿ ಸಂಗೀತಾ ಮಾತನಾಡಿ, ನಟ ನಟಿಯರು, ನಿರ್ದೇಶಕರಿಗೆ ಕಿರುಚಿತ್ರಗಳ ಮೂಲಕ ಸಿನಿದಸರಾ ವೇದಿಕೆ ಒದಗಿಸಿರುವುದು ಶ್ಲಾಘನೀಯ ಎಂದರು.

ಈ ಬಾರಿ ಶಿವಮೊಗ್ಗದಲ್ಲಿ ಚಿತ್ರದಸರಾದಲ್ಲಿ ಪಾಲ್ಗೊಳ್ಳುವ ಮೂಲಕ ನನ್ನ ದಸರಾ ಆರಂಭವಾಗಿದ್ದು ಖುಷಿ ತಂದಿದೆ. ಇಲ್ಲಿನ ಜನರೇ ತುಂಬಾ ಸಿಹಿ, “ಶಿವಮೊಗ್ಗ ಕಾನ್ ಫೆಸ್ಟಿವಲ್” ಮಟ್ಟಕ್ಕೆ ಗುರುತಿಸುವಂತಾಗಲು ನನ್ನ ಸಂಪೂರ್ಣ ಸಹಕಾರ ಬೆಂಬಲವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಈಶಾನ್ಯ ಶರ್ಮ ಅವರ ಡಬಲ್ ಟಿಕ್ ಮತ್ತು ವಿದ್ಯಾಲಕ್ಷ್ಮೀ ಅವರ ಘಮ ಎಂಬ ಕಿರುಚಿತ್ರ ಪ್ರದರ್ಶನ ಪ್ರೇಕ್ಷರಿಂದ ಅಪಾರ ಪ್ರಶಂಸೆಗೆ ಪಾತ್ರವಾಯಿತು.

ಚಿತ್ರರಂಗ ಕ್ಷೇತ್ರದಲ್ಲಿ ಸಾಧನೆಗೈದ ಚಂದ್ರಶೇಖರ್, ದಾನಮ್, ರಾಮಣ್ಣ, ರಘು ಗುಂಡ್ಲು ರವರಿಗೆ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್‌.ಎನ್.ಚೆನ್ನಬಸಪ್ಪ ಮಾತನಾಡಿ‌, ಚಲನಚಿತ್ರ ದಸರಾಗೆ ಎಷ್ಟೇ ಹಣದ ಕೊರತೆಯಾದರೂ ಚಿಂತೆಯಿಂದ ಯಾವುದೇ ಕಾರಣಕ್ಕೂ ಈ ಸಿನಿ ದಸರಾ ಪರಂಪರೆಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.

ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, 6 ತಿಂಗಳೊಳಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಹಾಗೂ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸುವ ಚಿಂತನೆ ನಡೆದಿದ್ದು ಅದಕ್ಕೆ ಪೂರಕ ಪ್ರಯತ್ನಗಳು ನಡೆಯಲಿದೆ ಹಾಗೇ ಫಿಲ್ಮಂ ಟೂರಿಸಂಗೂ ಒತ್ತುಕೊಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಸಹಚೇತನ ನಾಟ್ಯಾಲಯದ ಮಕ್ಕಳು ಶಿವಮೊಗ್ಗ ಕುರಿತ ನೃತ್ಯರೂಪಕ ಪ್ರದರ್ಶಿಸಿದರು. ನಾಗೇಂದ್ರ ಸ್ವಾಗತಿಸಿದರು. ಚೈತ್ರ ಸಜ್ಜನ್ ನಿರೂಪಿಸಿದರು.

Follow Us

Leave a Reply

Your email address will not be published. Required fields are marked *

Back to top button