ಮಕ್ಕಳ ದಸರಾ ಸಮಾರೋಪ ಸಮಾರಂಭ|ಓದಿನ ಜೊತೆ ಮಕ್ಕಳು ಸಂಸ್ಕಾರ ಬೆಳೆಸಿಕೊಳ್ಳಬೇಕು- ಎಸ್.ಆರ್.ಮಂಜುನಾಥ್
ಸರಿಗಮಪ ಖ್ಯಾತಿಯ ಶಿವಮೊಗ್ಗ ಪ್ರತಿಭೆ ಕುಮಾರಿ ಕೀರ್ತಿ ಹಾಗೂ ಫ್ರೀಸ್ಟೈಲ್ ದ್ರೋಣ್ ಜೋಡಿಸುವ ಮೂಲಕ ವಿಶ್ವದಾಖಲೆ ಮಾಡಿದ ಬಾಲಕ ವಿರಾಟ್ ರವರನ್ನು ಮಕ್ಕಳ ದಸರಾ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಶಿವಮೊಗ್ಗ: ಓದುವ ಹಸಿವೊಂದಿದ್ದರೇ ಸಾಕು. ಸರ್ಕಾರಿ ಶಾಲೆ ಖಾಸಗಿ ಶಾಲೆ ಯಾವುದಾರೂ ಆ ಮಕ್ಕಳ ಸಾಧನೆಗೆ ಅಡ್ಡಿಯಾಗದು. ಓದಿನ ಜೊತೆಗೆ ಇಂದಿನ ಮಕ್ಕಳು ಸಂಸ್ಕಾರವಂತರಾಗುವುದೂ ಬಹಳ ಮುಖ್ಯವೆಂದು ಶಿವಮೊಗ್ಗ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.

ಅಲ್ಲಮ ಪ್ರಭು ಮೈದಾನದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ, ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಕ್ಕಳ ದಸರಾ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ದಸರಾ ಸಮಾರೋಪ ಸಮಾರಂಭದಲ್ಲಿ ಮುಖ್ಯ ಆಕರ್ಷಣೆಯಾದ ಸರಿಗಮಪ ಖ್ಯಾತಿಯ ಶಿವಮೊಗ್ಗ ಪ್ರತಿಭೆ ಕುಮಾರಿ ಕೀರ್ತಿ ಹಾಗೂ ಫ್ರೀಸ್ಟೈಲ್ ದ್ರೋಣ್ ಜೋಡಿಸುವ ಮೂಲಕ ವಿಶ್ವದಾಖಲೆ ಮಾಡಿದ ಬಾಲಕ ವಿರಾಟ್ ರವರನ್ನು ಮಕ್ಕಳ ದಸರಾ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಮಕ್ಕಳ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಶಾಸಕ ಎಸ್.ಎನ್.ಚೆನ್ನಬಸಪ್ಪ ಪ್ರಶಸ್ತಿ ಪ್ರದಾನ ಮಾಡಿದರು.

ಈ ಹಿಂದೆ ಅಂಬೇಡ್ಕರ್ ಭವನದಲ್ಲಿಯೇ ಮುಕ್ತಾಯಗೊಳ್ಳುತ್ತಿದ್ದ ಮಕ್ಕಳ ದಸರಾ ಕಲರವ ಅಲ್ಲಮಪ್ರಭು ಮೈದಾನದಂತಹ ಬೃಹತ್ ವೇದಿಕೆಗೆ ಸ್ಥಳಾಂತರಗೊಂಡಿದ್ದು ಗಮನಾರ್ಹ ಸಂಗತಿಯಾಗಿತ್ತು.

ಮಕ್ಕಳ ದಸರಾದಲ್ಲಿ ಸಾಂಸ್ಕೃತಿಕ ವೈಭವ ಸಾರುವಂತಹ ನೃತ್ಯ ರೂಪಕಗಳಿಗೆ ವಿವಿಧ ಡ್ಯಾನ್ಸ್ ಶಾಲೆಗಳ ಮಕ್ಕಳು ಅದ್ಬುತವಾಗಿ ಪ್ರದರ್ಶನ ನೀಡಿದರು.
ಇನ್ನೂ ವೇದಿಕೆ ಹಿಂಭಾಗ ಹೊರಭಾಗಗಳಲ್ಲಿ ನೃತ್ಯ ಪ್ರದರ್ಶನ ನೀಡುವ ಪುಟ್ಟ ಮಕ್ಕಳು ವಿವಿಧ ಬಗೆಯ ಕಲಾತ್ಮಕ ಬಟ್ಟೆ ತೊಟ್ಟು ಟೀಮ್ ಜೊತೆ ನೃತ್ಯಪ್ರದರ್ಶನ ನೀಡಲು ನಡೆಸುತ್ತಿದ್ದ ತಯಾರಿ ಕೂಡ ಗಮನಸೆಳೆಯಿತು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ವಿಶ್ವಾಸ್, ರೇಖಾ ರಂಗನಾಥ್, ಅನಿತಾ ರವಿಶಂಕರ್ ಬಿಜೆಪಿ ಮುಖಂಡರಾದ ಜ್ಞಾನೇಶ್ವರ್, ಸುರೇಖಾ ಮುರಳೀಧರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.








