ಕುವೆಂಪು ವಿವಿ 35ನೇ ಘಟಿಕೋತ್ಸವ| ಕೋಣಂದೂರು ಲಿಂಗಪ್ಪ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್|ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭಾಗಿ
ರಾಜ್ಯಪಾಲ ಮತ್ತು ಕುಲಾಧಿಪತಿ ಥಾವರಚಂದ್ ಗೆಹ್ಲೋಟ್, ಸಹ ಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ. ಸುಧಾಕರ್ ಅವರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿಯ ಅಧ್ಯಕ್ಷ ಪ್ರೊ. ಅನಿಲ್ ಡಿ. ಸಹಸ್ರಬುಧೆ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.

ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ ಸೇರಿದಂತೇ ಹಿರಿಯ ರಂಗಕರ್ಮಿ ಕೆ. ವಿ. ಅಕ್ಷರ ಮತ್ತು ಬೆಂಗಳೂರು ವಿವಿ ಮಾಜಿ ವಿಸಿ ಪ್ರೊ. ಎಚ್. ಎ. ರಂಗನಾಥ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಉಪಕುಲಪತಿ ಶರತ್ ಅನಂತಮೂರ್ತಿ ತಿಳಿಸಿದ್ದಾರೆ.

ಸೋಮವಾರದಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಮೇ 06 ರಂದು ನಡೆಯಲಿರುವ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಒಟ್ಟು 14 ಮಂದಿ ಸಾಧಕರ ಪಟ್ಟಿಯನ್ನ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅದರಲ್ಲಿ ಮೂವರ ಹೆಸರನ್ನು ರಾಜ್ಯಪಾಲರಿಂದ ಅಧಿಕೃತ ಅನುಮೋದನೆ ದೊರೆತಿದೆ ಎಂದು ಉಪಕುಲಪತಿ ಶರತ್ ಅನಂತಮೂರ್ತಿ ಹೇಳಿದರು.
ಕುವೆಂಪು ವಿವಿ ಘಟಿಕೋತ್ಸವ|
ಮೇ 06 ರಂದು ಕುವೆಂಪು ವಿವಿಯ 35ನೇ ವಾರ್ಷಿಕ ಘಟಿಕೋತ್ಸವ ಶಂಕರಘಟ್ಟದಲ್ಲಿರುವ ವಿವಿ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ರಾಜ್ಯಪಾಲ ಮತ್ತು ಕುಲಾಧಿಪತಿ ಥಾವರಚಂದ್ ಗೆಹ್ಲೋಟ್, ಸಹ ಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ. ಸುಧಾಕರ್ ಅವರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿಯ ಅಧ್ಯಕ್ಷ ಪ್ರೊ. ಅನಿಲ್ ಡಿ. ಸಹಸ್ರಬುಧೆ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.
ಇದೇ ವೇಳೆ ಗೌರವ ಡಾಕ್ಟರೇಟ್‌ಗೆ ಭಾಜನರಾದ ಮೂವರು ಮಹನಿಯರಿಗೆ ಪದವಿ ಪ್ರಧಾನ ಮಾಡಲಾಗುವುದು ಎಂದು ಉಪಕುಲಪತಿ ಶರತ್ ಅನಂತಮೂರ್ತಿ ತಿಳಿಸಿದರು.
ಪದವಿ ಪ್ರಧಾನ|
ಪಿಹೆಚ್.ಡಿ. ಪದವಿಗೆ 163 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. 106 ಪುರುಷರು, 57ಮಂದಿ ಮಹಿಳೆಯರು ಇದ್ದಾರೆ. 16,955 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. 7015 ಪುರುಷರು ಹಾಗೂ 9940 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.
155 ಸ್ವರ್ಣಪದಕಗಳಿದ್ದು , ಅವುಗಳನ್ನು 11 ಪುರುಷರು ಹಾಗೂ 68 ಮಹಿಳೆಯರು ಸೇರಿ ಒಟ್ಟು 79 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. 21 ನಗದು ಬಹುಮಾನಗಳು ಇದ್ದು, ಅವುಗಳನ್ನು 05 ಪುರುಷರು ಹಾಗೂ 24 ಮಹಿಳೆಯರು ಸೇರಿ ಒಟ್ಟು 29 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
ಚಿನ್ನದ ಹುಡುಗ ಅಭಿಷೇಕ್ !
10 ಚಿನ್ನದ ಪದಕವನ್ನು ಮತ್ತು ಎರಡು ನಗದು ಬಹುಮಾನವನ್ನು ಕನ್ನಡ ವಿಭಾಗದ ಅಭಿಷೇಕ್ ಹೆಚ್. ಎಂ ಅತಿ ಹೆಚ್ಚು ಪಡೆದು ಚಿನ್ನದ ವಿದ್ಯಾರ್ಥಿಯಾಗಿದ್ದಾರೆ. ಪರಿಸರ ವಿಜ್ಞಾನ ವಿಭಾಗದ ರಕ್ಷಾ 7 ಚಿನ್ನದ ಪದಕವನ್ನು ಪಡೆದಿದ್ದಾರೆ.
ಎಂ.ಎಸ್ಸಿ.(ಜೈವಿಕ ತಂತ್ರಜ್ಞಾನ) ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಆರ್. ಸೃಷ್ಠಿ 6 ಚಿನ್ನದ ಪದಕ, , ಸಹ್ಯಾದ್ರಿ ಕಾಮರ್ಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿನಿ ಸಹನಾ ಗಣೇಶ್ ಶೇಟ್ ಮತ್ತು ಶಂಕರಘಟ್ಟ್ದ ಸಮಾಜ ಅಧ್ಯಯನ ಶಾಸ್ತ್ರದ ಸಜನಾ ಎಸ್ ತಲಾ 5 ಮತ್ತು ಚಿಕ್ಕಮಗಳೂರು ಸ್ನಾತಕೋತ್ತರ ಕೇಂದ್ರದ ಗಣಿತಶಾಸ್ತ್ರ ವಿದ್ಯಾರ್ಥಿ ಅಭಿಲಾಷ್ 4 ಚಿನ್ನದ ಪದಕ ಪಡೆದು ಸ್ವರ್ಣಪದಕ ವಿಜೇತ ವಿದ್ಯಾರ್ಥಿಗಳಾಗಿದ್ದಾರೆ.
ಗೌರವ ಡಾಕ್ಟರೇಟ್ ಪಡೆದ ಮೂವರು ಮಹನಿಯರು|

ಗೌರವ ಡಾಕ್ಟರೇಟ್ ಪಡೆದಿರುವ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರು ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದಲ್ಲಿ ಶ್ರೀ ರಾಮಪ್ಪ-ಶ್ರೀಮತಿ ಗೌರಮ್ಮ ದಂಪತಿಗಳ ಮಡಿಲಲ್ಲಿ1934 ಫೆಬ್ರವರಿ 24ರಂದು ಜನಿಸಿದವರು.
ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ನಂತರ ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಪ್ರೌಢಶಿಕ್ಷಣ ಪಡೆದವರು. ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ, ಬಿ.ಎಲ್. ಪದವಿಯನ್ನು ಬೆಂಗಳೂರಿನಲ್ಲಿ ಪಡೆದವರು.
ಬೆಂಗಳೂರು ಮಹಾನಗರ ಪಾಲಿಕೆಯ ಪ್ರೌಢಶಾಲೆ ಅಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿ ಬೆಂಗಳೂರು ನಗರದ ಮಲ್ಲೇಶ್ವರಂ, ಚಾಮರಾಜಪೇಟೆ ಮೊದಲಾದಕಡೆ ಅಧ್ಯಾಪಕರಾಗಿ ಸೇವೆಸಲ್ಲಿಸಿದವರು.
1969 ರಿಂದ ಶಿವಮೊಗ್ಗದಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಅವರು, ಸಮಾಜವಾದಿ ಚಳುವಳಿಯ ಆರಂಭದಿಂದಲೇ ಸಕ್ರಿಯವಾಗಿ ಗುರುತಿಸಿ ಕೊಂಡವರು.
ಜನತಾದಳದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಯಸ್ಕರ ಮಂಡಳಿ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ಲಿಂಗಪ್ಪನವರು ಕನ್ನಡ ಯುವಜನ ಸಭಾವನ್ನು ಸ್ಥಾಪಿಸಿ, ಸಂಚಾಲಕರಾಗಿ ಕನ್ನಡನಾಡು-ನುಡಿಯ ಸಂವರ್ಧನೆಗೆ ಚಳುವಳಿಗಳನ್ನು ರೂಪಿಸಿದವರು.
1972 ರಿಂದ 79 ರವರೆಗೆ ಕರ್ನಾಟಕ ವಿಧಾನಸಭೆ ಸದಸ್ಯರಾಗಿ, 1989ರಿಂದ 92ರವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಅನನ್ಯವಾದ ಸೇವೆಸಲ್ಲಿಸಿದವರು. ಕರ್ನಾಟಕ ನಾಮಕರಣಕ್ಕಾಗಿ ಹೋರಾಡಿದವರು.
”ಉಳುವವನೇ ಹೊಲದೊಡಯ” ಹೋರಾಟ ಆರಂಭಿಸಿದವರು. ಹಾವನೂರು ವರದಿ ಅನುಷ್ಠಾನಕ್ಕಾಗಿ ಶ್ರಮಿಸಿದವರು. ಕರ್ನಾಟಕ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾಗಿ, ಶಿವಮೊಗ್ಗ ಜಿಲ್ಲಾ ಜನತಾ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಸಮತಪಕ್ಷದ ಕಾರ್ಯದರ್ಶಿಯಾಗಿ ಅಪೂರ್ವವಾದ ಸೇವೆಸಲ್ಲಿಸಿದವರು.
ಡಾ. ಕೆ. ವಿ. ಅಕ್ಷರ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೂಡು ಗ್ರಾಮದಲ್ಲಿನ ಶ್ರೀ ಕೆ ವಿ ಸುಬ್ಬಣ್ಣ ಹಾಗೂ ಶ್ರೀಮತಿ ಕೆ ವಿ ಶೈಲಜಾ ದಂಪತಿಗಳ ಮಗನಾಗಿ 1960 ಏಪ್ರಿಲ್ 24 ರಂದು ಜನಿಸಿದರು.
ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬಿ. ಎ. ಪದವಿಯನ್ನು ಸಾಗರದಲ್ಲಿ ವ್ಯಾಸಂಗ ಮಾಡಿದರು. ನಂತರ ಇವರು ನವದೆಹಲಿಯಲ್ಲಿ ರಾಷ್ಟೀಯ ನಾಟಕ ಶಾಲೆಯಲ್ಲಿ ಡಿಪ್ಲೊಮೊ ಪದವಿ ಪಡೆದರು. University of Leeds ನಲ್ಲಿ ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನದ ನೆರವಿನಿಂದ ನಾಟಕ ಮತ್ತು ರಂಗಕಲೆಯಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಶ್ರೀಯುತರು ಕನ್ನಡ ರಂಗಭೂಮಿಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.
ಪ್ರೊ. ಹೆಚ್. ಎ. ರಂಗನಾಥ್|

ಹಾಸನ ಅಣ್ಣೀಗೌಡ ರಂಗನಾಥ್ (ಹೆಚ್. ಎ. ರಂಗನಾಥ್) ಅವರು 16 ಜೂನ್ 1945 ರಂದು ಶ್ರೀ ಹೆಚ್. ಬಿ. ಅಣ್ಣೀ ಗೌಡ ಮತ್ತು ಶ್ರೀಮತಿ ಭಾಗ್ಯಲಕ್ಷ್ಮಮ್ಮ ದಂಪತಿಗಳ ಮಡಿಲಲ್ಲಿ ಜನಿಸಿದರು.
ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮತ್ತು ಪ್ರೌಢಶಾಲೆಯಿಂದ ಡಾಕ್ಟರೇಟ್ ಪದವಿಯವರೆಗೆ ಮೈಸೂರಿನಲ್ಲಿ ಪೂರೈಸಿದರು.
ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಹಾಗೂ ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪೋಸ್ಟ್-ಡಾಕ್ಟರೇಟ್ ಸಂಶೋಧನೆಯನ್ನು ಪೂರೈಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ, ನ್ಯಾಕ್ (NAAC) ನಿರ್ದೇಶಕರಾಗಿ, ಕರ್ನೂಲ್‌ನ IIIT ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಮೈಸೂರು ವಿಶ್ವವಿದ್ಯಾಲಯದ ಜೀವಮಾನದ ಗೌರವಾನ್ವಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ







