108 ಆ್ಯಂಬುಲೆನ್ಸ್ ಈಗ ಮತ್ತಷ್ಟು ಹೈಟೆಕ್|ದೇಶದಲ್ಲೇ ಮೊದಲ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ|ಗುಣಮಟ್ಟದ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಬನ್ನಿ-ಸಿದ್ದರಾಮಯ್ಯ
ಆರೋಗ್ಯ ಸಮಸ್ಯೆಗೆ ನೆರವು ಕೇಳಿ ಬರುವ ಜನರು ಸರ್ಕಾರದಿಂದ ಧನಸಹಾಯ ಕೇಳುವ ಬದಲು, ತಮ್ಮ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.

ಎಲ್ಲ ವರ್ಗದ ಜನರಿಗೆ ಅನುಕೂಲವಾಗಲೆಂದು ಜಾರಿಗೆ ತಂದ 108 ಆ್ಯಂಬುಲೆನ್ಸ್ ಸೇವೆ ಈಗ ಮತ್ತಷ್ಟು ಹೈಟೆಕ್ ಆಗಿ ಹೊರಹೊಮ್ಮಿದೆ.
ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ 108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರದ ಆರೋಗ್ಯ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಸೋಮವಾರದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ “108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ”ಕ್ಕೆ ಸೋಮವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪ ಬೆಳಗುವ ಮೂಲಕ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, 108 ಆ್ಯಂಬುಲೆನ್ಸ್ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು. ತುರ್ತು ಸಂದರ್ಭಗಳಲ್ಲಿ ತ್ವರಿತ ಗತಿಯಲ್ಲಿ ಚಿಕಿತ್ಸೆ ದೊರೆಯಬೇಕು ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಆರೋಗ್ಯ ಸೇವೆ ದೊರೆಯಲು ಈ ಕೇಂದ್ರ ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.
ಪರಿಣಾಮಕಾರಿ ಸೇವೆಗೆ ಸರ್ಕಾರ ಬದ್ಧ|
ರಾಜ್ಯದಲ್ಲಿ 18 ವರ್ಷಗಳಿಂದ 108 ಆ್ಯಂಬುಲೆನ್ಸ್ ಸೇವೆಯನ್ನು ನೀಡಲಾಗುತ್ತಿದ್ದು, 2025-26 ರ ಬಜೆಟ್ ಘೋಷಣೆಯಂತೆ 108 ತುರ್ತು ಆಂಬುಲೆನ್ಸ್ ಸೇವೆಗಳ ನಿರ್ವಹಣೆಗೆ ಮೀಸಲಾದ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಆರೋಗ್ಯ ಸೇವೆ ಪರಿಣಾಮಕಾರಿಯಾಗಿ ಜನರಿಗೆ ಲಭಿಸುವಂತಾಗುವುದು ಸರ್ಕಾರದ ಆದ್ಯತೆಯಾಗಿದ್ದು, ಸರ್ಕಾರದ ಗುಣಮಟ್ಟದ ಆರೋಗ್ಯ ಸೇವೆಯಿಂದ ಜನರ ವಿಶ್ವಾಸ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಆ್ಯಂಬುಲೆನ್ಸ್ ತುರ್ತು ಚಿಕಿತ್ಸೆಗೆ ಸಹಕಾರಿ|
ರಸ್ತೆ ಅಪಘಾತಗಳು, ಹೆರಿಗೆ, ಹೃದಯರೋಗಿಗಳು ಸೇರಿದಂತೆ ಹಲವು ಕ್ಲಿಷ್ಟ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಅತ್ಯವಶ್ಯವಾಗಿದ್ದು, ಆ ಸುವರ್ಣ ಅವಧಿಯಲ್ಲಿ ಚಿಕಿತ್ಸೆ ದೊರೆತರೆ ರೋಗಿಗಳು ಬದುಕುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಿಎಂ ಹೇಳಿದರು.

ಸುವರ್ಣ ಅವಧಿಯಲ್ಲಿ ದೊರೆತ ಚಿಕಿತ್ಸೆಯಲ್ಲಿ ಸುಮಾರು ಶೇ.80 ರಷ್ಟು ಜನರು ಬದುಕುಳಿದಿದ್ದಾರೆ. ಜೀವನ್ಮರಣದ ಹೋರಾಟದಲ್ಲಿ ತುರ್ತು ಚಿಕಿತ್ಸೆಯು ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದರು.
ಬೆಂಗಳೂರು ನಗರದಲ್ಲಿ 65 ರಿಂದ 70 ಆ್ಯಂಬುಲೆನ್ಸ್ ಗಳಿದ್ದು, ತುರ್ತು ಚಿಕಿತ್ಸೆಗೆ ನೆರವಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇನ್ನು 108 ಆ್ಯಂಬುಲೆನ್ಸ್ ವ್ಯವಸ್ಥೆ ಖಾಸಗಿಯವರ ಕೈಯಲ್ಲಿದ್ದಾಗ, ಅವರ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಿರಲಿಲ್ಲ. ಆದರೆ ಪ್ರಸ್ತುತ ಈ ವ್ಯವಸ್ಥೆ ಸರ್ಕಾರದ ಅಧೀನದಲ್ಲಿರುವುದರಿಂದ ಈ ಸೇವೆಯ ಹೊಣೆಗಾರಿಕೆ ಹೆಚ್ಚಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಿಎಂ ಸಲಹೆ|
ಆರೋಗ್ಯ ಸಮಸ್ಯೆಗೆ ನೆರವು ಕೇಳಿ ಬರುವ ಜನರು ಸರ್ಕಾರದಿಂದ ಧನಸಹಾಯ ಕೇಳುವ ಬದಲು, ತಮ್ಮ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.
ಕ್ಯಾನ್ಸರ್ ಸೇರಿದಂತೆ ಹಲವು ಖಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆಯ ವ್ಯವಸ್ಥೆಯಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಆರೊಗ್ಯ ವ್ಯವಸ್ಥೆಯನ್ನು ನೀಡಲು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ , ಶಾಸಕರಾದ ಸುರೇಶ್ಕುಮಾರ್, ಪ್ರಿಯಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು.








