ಕುಡಿಯುವ ನೀರಿಗೆ ತೊಂದರೆಯಾಗಬಾರದು|ಜಲಕ್ಷಾಮದ ಸವಾಲಿಗೆ ಸಿದ್ದರಾಗಿ|ಅಧಿಕಾರಿಗಳಿಗೆ ಶಾಸಕ ಚೆನ್ನಬಸಪ್ಪ ಖಡಕ್ ಸೂಚನೆ
ಜಲಾಶಯದಲ್ಲಿ ಸದ್ಯ ಲಭ್ಯವಿರುವ ನೀರಿನ ಪ್ರಮಾಣ ಹಾಗೂ ನಗರದ ದೈನಂದಿನ ಪೂರೈಕೆಯ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಶಾಸಕ ಎಸ್.ಎನ್.ಚೆನ್ನಬಸಪ್ಪ ಮಾಹಿತಿ ಪಡೆದರು.

ಶಿವಮೊಗ್ಗ: ಮುಂಗಾರು ಮಳೆ ಕ್ಷೀಣವಾಗಿರುವುದರಿಂದ ಜಲಮೂಲಗಳನ್ನ ಸ್ವಚ್ಛವಾಗಿಡಬೇಕು ಹಾಗೂ ಶಿವಮೊಗ್ಗ ನಗರದ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಶಾಸಕ ಎಸ್.ಎನ್.ಚೆನ್ನಬಸಪ್ಪ, ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸೋಮವಾರದಂದು ಶಾಸಕರ ಕರ್ತವ್ಯ ಭವನದಲ್ಲಿ ಮಹಾನಗರ ಪಾಲಿಕೆ ಹಾಗೂ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಜಂಟಿ ಪರಿಶೀಲನಾ ಸಭೆಯಲ್ಲಿ ಚರ್ಚೆ ವೇಳೆ ಅವರು ಖಡಕ್ ಸೂಚನೆ ನೀಡಿದರು.

ಜಲಾಶಯದಲ್ಲಿ ಸದ್ಯ ಲಭ್ಯವಿರುವ ನೀರಿನ ಪ್ರಮಾಣ ಹಾಗೂ ನಗರದ ದೈನಂದಿನ ಪೂರೈಕೆಯ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಶಾಸಕ ಎಸ್.ಎನ್.ಚೆನ್ನಬಸಪ್ಪ ಮಾಹಿತಿ ಪಡೆದರು.
ಮಳೆಯ ಕೊರತೆಯಿರುವುದರಿಂದ ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಜಲಕ್ಷಾಮವನ್ನು ಎದುರಿಸಲು ಈಗಿನಿಂದಲೇ ವೈಜ್ಞಾನಿಕ ನೀರಿನ ಪೂರೈಕೆ ಯೋಜನೆ ಹಾಗೂ ತುರ್ತು ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಅವರು ಸೂಚಿಸಿದರು.
ನಗರದ ವ್ಯಾಪ್ತಿಯಲ್ಲಿ ಹಾದುಹೋಗುವ ಚಾನೆಲ್ಗಳ ಅಭಿವೃದ್ಧಿ ಹಾಗೂ ಅವುಗಳ ನಿರಂತರ ಸ್ವಚ್ಛಗೆ ಆದ್ಯತೆ ವಹಿಸಬೇಕೆಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಹಾನಗರ ಪಾಲಿಕೆ ಹಾಗೂ ತುಂಗಾ ಮೇಲ್ದಂಡೆ ಯೋಜನಾ ಮಂಡಳಿಯ ನಡುವೆ ಸಮನ್ವಯದ ಕೊರತೆಯಿಂದಾಗಿ ಸಾರ್ವಜನಿಕ ಕಾಮಗಾರಿಗಳಿಗೆ ಅಡ್ಡಿಯಾಗಬಾರದು ಎಂದು ಹೇಳಿದರು.
ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರು, ಮುಖ್ಯ ಇಂಜಿನಿಯರ್ಗಳು, ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ







