DistrictShivamogga

ಪೊಲೀಸ್ ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ ಹಿನ್ನೆಲೆ|ಸರ್ಜಿ ಫೌಂಡೇಶನ್‌, ಜೆಸಿಐ ಮಲ್ನಾಡ್ ಸಹಯೋಗದಲ್ಲಿ “ಕಾಯಕಸೇತು ಪರೀಕ್ಷಾಪಥ”|ತಿಂಗಳಿಡಿ ಉಚಿತ ಆನ್‌ಲೈನ್ ತರಬೇತಿ-ಡಾ. ಧನಂಜಯ್ ಸರ್ಜಿ

ಜುಲೈ 1 ರಂದು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಒಂದು ದಿನದ ಕಾರ್ಯಾಗಾರ ನಡೆಯಲಿದೆ.

ಶಿವಮೊಗ್ಗ: ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಜ್ಜಾಗುತ್ತಿರುವ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ಶಿವಮೊಗ್ಗದಲ್ಲಿ ಒಂದು ದಿನದ ಉಚಿತ ತರಬೇತಿ ಮತ್ತು ಮಾರ್ಗದರ್ಶನ ಜೊತೆಗೆ ತಿಂಗಳ 1 ಉಚಿತ ಆನ್ ಲೈನ್ ಕೋಚಿಂಗ್ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಸರ್ಜಿ ಫೌಂಡೇಶನ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ತಿಳಿಸಿದರು.

ಜೆಸಿಐ ಶಿವಮೊಗ್ಗ ಮಲ್ನಾಡ್, ಶಿವಮೊಗ್ಗ ಕೋಚಿಂಗ್ ಅಕಾಡೆಮಿ ಮತ್ತು ಸರ್ಜಿ ಫೌಂಡೇಶನ್ ಸಹಯೋಗದಲ್ಲಿ ಈ ಕಾರ್ಯಾಗಾರ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 1 ರಂದು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಒಂದು ದಿನದ ಕಾರ್ಯಾಗಾರ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರ ಸೋಮಪ್ಪ ಡುಂಡಿಗೆರೆ ಮತ್ತು ನಾಗರಾಜ್ ರೆಡ್ಡಿ ತರಬೇತಿ ಹಾಗೂ ಮಾರ್ಗದರ್ಶನ ನೀಡುವರು ಎಂದು ತಿಳಿಸಿದರು.

ಜಿಲ್ಲೆಯ ಸ್ಪರ್ಧಾಕಾಂಕ್ಷಿಗಳಿಗೆ ಇತ್ತೀಚಿನ ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ ಮತ್ತು ದೈಹಿಕ ಪರೀಕ್ಷೆ ನಡೆಸುವ ಪದ್ಧತಿ,ಪಠ್ಯಕ್ರಮದ ವಿಶ್ಲೇಷಣೆ, ಪರೀಕ್ಷೆಗಳನ್ನು ಎದುರಿಸಲು ಅಭ್ಯರ್ಥಿಗಳು ಅನುಸರಿಸಬೇಕಾದ ಸುಲಭ ತಂತ್ರಗಳು, ಪ್ರಸ್ತುತ ಜಾಗತಿಕ ಸ್ಪರ್ಧೆಯ ವಾಸ್ತವತೆಗಳು ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿನ ಇತ್ತೀಚಿನ ಬದಲಾವಣೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದು ಡಾ.ಧನಂಜಯ್‌ ಸರ್ಜಿ ತಿಳಿಸಿದರು.

ಕಾಯಕಸೇತು ಪರೀಕ್ಷಾಪಥ” ಎಂಬ ಶೀರ್ಷಿಕೆಯಡಿ ’30 ದಿನಗಳ ಉಚಿತ ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ’ ಕಾರ್ಯಕ್ರಮ ನಡೆಯಲಿದೆ . ಜೂನ್ 29ರಂದು ಆರಂಭವಾಗಲಿದೆ.

ತರಬೇತಿಯಲ್ಲಿ ಪ್ರತಿದಿನ ಬೆಳಿಗ್ಗೆ 2 ಗಂಟೆ ಮತ್ತು ಸಂಜೆ 2 ಗಂಟೆಗಳ ಕಾಲ ನುರಿತ ಉಪನ್ಯಾಸಕರಿಂದ ಬೋಧನೆ ನೀಡಲಾಗುವುದು.

ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನ ಹಾಗೂ ಸಮಯ ನಿರ್ವಹಣಾ ಕೌಶಲ್ಯ ಹೆಚ್ಚಿಸಲು ಪ್ರತಿದಿನ ಮತ್ತು ವಾರಕ್ಕೊಮ್ಮೆ ಟೆಸ್ಟ್ ಸೀರೀಸ್ ನಡೆಸಲಾಗುತ್ತದೆ.

ಭಾಗವಹಿಸುವ ಅಭ್ಯರ್ಥಿಗಳಿಗೆ ಸುಲಭವಾಗಿ ಓದಲು ಅನುಕೂಲವಾಗುವಂತೆ ಸಮಗ್ರ ‘ಸ್ಟಡಿ ಮೆಟೀರಿಯಲ್’ (ಕ್ಲಾಸ್ ನೋಟ್ಸ್) ಅನ್ನು ಡಿಜಿಟಲ್ ರೂಪದಲ್ಲಿ ಉಚಿತವಾಗಿ ಒದಗಿಸಲಾಗುತ್ತದೆ ಎಂದು ಡಾ. ಧನಂಜಯ್‌ ಸರ್ಜಿ ತಿಳಿಸಿದರು.

ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಕನಸು ಹೊತ್ತ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ಅಭ್ಯರ್ಥಿಗಳಿಗೆ, ಯುವಜನತೆಗೆ ಉನ್ನತ ಮಟ್ಟದ ಶೈಕ್ಷಣಿಕ ನೆರವು ನೀಡುವ ಸದುದ್ದೇಶ ಹೊಂದಿದೆ ಎಂದು ಜೆಸಿಐ ಮಲ್ನಾಡ್ ಹಾಗೂ ಸರ್ಜಿ ಪೌಂಡೇಶನ್ ಉದ್ದೇಶವಾಗಿದೆ ಎಂದು ವಿವರಿಸಿದರು.

ನೋಂದಾಯಿಸಿಕೊಂಡ ಅರ್ಹ ಪದವೀಧರ ಅಭ್ಯರ್ಥಿಗಳನ್ನು ಮಾತ್ರ ತರಬೇತಿಗೆ ಪರಿಗಣಿಸಲಾಗುವುದು.ಮಲೆನಾಡು ಭಾಗದ ವಿದ್ಯಾವಂತ ಯುವಜನತೆ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಮನವಿ ಮಾಡಿದರು

ಬಳಿಕ ಮಾತನಾಡಿದ ಜೆಸಿಐ ಮಲ್ನಾಡ್ ಅಧ್ಯಕ್ಷ ಘನಶ್ಯಾಮ್, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಈ ಎರಡು ಮಹತ್ವದ ಕಾರ್ಯಕ್ರಮಗಳು ವೇದಿಕೆಯಾಗಲಿದೆ.
ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವ ದೃಷ್ಟಿಯಿಂದ 30 ದಿನಗಳ ಆನ್‌ಲೈನ್ ತರಬೇತಿಗೆ ಕೇವಲ 1,000 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು

ಅಭ್ಯರ್ಥಿಗಳು ‘ಕಾಯಕ ಸೇತು’ ಜಾಬ್ ಪೋರ್ಟಲ್ ಮೂಲಕ ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಚೀವರ್ಸ್ ಕೋಚಿಂಗ್ ಸೆಂಟರ್‌ನ ವರುಣ್ , ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಅಧ್ಯಕ್ಷರಾದ ಘನಶ್ಯಾಮ್ ಜಿ ಗಿರಿಮಾಜಿ ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಕಾರ್ಯಾಧ್ಯಕ್ಷ ವಿಕಾಸ್ ಹೆಗ್ಡೆ, ಜೆ.ಸಿ.ಐ ಮಲ್ನಾಡ್ ಪೂರ್ವ ವಲಯ ಅಧಿಕಾರಿ ಜೆ.ಸಿ ಕಿರಣ್ ಕುಮಾರ್, ,ಶಂಕರ್ ಸರ್ಜಿ, ಬಾಳೆಕಾಯಿ ಮೋಹನ್ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button