Shivamogga

ಕದ್ದು ಮುಚ್ಚಿ ಮಾಸ್ಟರ್‌ ಪ್ಲ್ಯಾನ್‌ ಕರಡು ಸಿದ್ದತೆಗೆ ಯತ್ನ|ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಟ್ಟಿಲ್ಲ|ನ್ಯಾಯಾಲಯದ ಮೊರೆಗೆ ನಿರ್ಧಾರ-ಕೆ.ವಿ.ವಸಂತ್ ಕುಮಾರ್

ಯೋಜನೆಯ ನಕ್ಷೆಯನ್ನು ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಿಲ್ಲ. ಬಡಾವಣೆಗಳ ಹೆಸರು, ಸ್ಥಳಗಳ ಗುರುತು, ರಸ್ತೆಗಳ ಹೆಸರು ಹಾಗೂ ಅಗಲದ ವಿವರಗಳಿಲ್ಲದಿರುವುದರಿಂದ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ತೊಂದರೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ–ಭದ್ರಾವತಿ 2041ರ ಮಾಸ್ಟರ್ ಪ್ಲಾನ್ ಕರಡು ಸಾರ್ವಜನಿಕರ ಅಭಿಪ್ರಾಯಪಡೆಯದೇ ,ಸಿದ್ಧಪಡಿಸಲಾಗಿದ್ದು ವೆಬ್‌ಸೈಟ್ ನಲ್ಲಿ ಪ್ರಕಟಿಸದೇ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲದಂತಾಗಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್ ಕುಮಾರ್ ಆರೋಪಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಸ್ಟರ್ ಪ್ಲಾನ್‌ನ ಸಂಪೂರ್ಣ ವರದಿ, ಕರಡು ನಕ್ಷೆ ಹಾಗೂ ಪಿಡಿಎಫ್ ಪ್ರತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತಾಗಬೇಕೆಂದರು.

ಮಹಾಯೋಜನೆ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ,ಆಕ್ಷೇಪಣೆ ಸಲಹೆಗಳನ್ನು ಪರಿಗಣಿಸಿದ ಬಳಿಕವೇ ಅಂತಿಮ ಕರಡು ಸಿದ್ದಗೊಳಿಸಬೇಕು ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದೆಂದು ಎಚ್ಚರಿಕೆ ನೀಡಿದರು.

ಕರಡು ಯೋಜನೆಯನ್ನು ಪ್ರಾಧಿಕಾರದ ಕಚೇರಿಯ ಒಳಭಾಗದ ಸೂಚನಾ ಫಲಕದಲ್ಲಿ ಅಳವಡಿಸಲಾಗಿದೆ. ಅದೂ ಅಧಿಕಾರಿಗಳ ಸಹಿಯಿಲ್ಲದೆ, ಓದಲು ಸಾಧ್ಯವಾಗದಷ್ಟು ಚಿಕ್ಕದಾಗಿದೆ.

ಯೋಜನೆಯ ನಕ್ಷೆಯನ್ನು ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಿಲ್ಲ. ಬಡಾವಣೆಗಳ ಹೆಸರು, ಸ್ಥಳಗಳ ಗುರುತು, ರಸ್ತೆಗಳ ಹೆಸರು ಹಾಗೂ ಅಗಲದ ವಿವರಗಳಿಲ್ಲದಿರುವುದರಿಂದ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ತೊಂದರೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಹಾಯೋಜನೆ–2031ರಲ್ಲಿ 200 ಅಡಿ ರಸ್ತೆಯ ಪಕ್ಕದಲ್ಲಿ ಪ್ರಸ್ತಾಪಿಸಿದ್ದ ಆರು ಪ್ರಾದೇಶಿಕ ಉದ್ಯಾನಗಳ ಪೈಕಿ ಹಲವು ಯೋಜನೆಗಳನ್ನು ಕೈಬಿಟ್ಟಿರುವುದು ಅಥವಾ ಬದಲಾಯಿಸಿರುವುದಕ್ಕೆ ವಿರೋಧವಿದೆ ಎಂದು ಹೇಳಿದರು.

ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ 200 ಅಡಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ಗೆ ಸೇರಿಸಿರುವುದರಿಂದ ವರ್ತುಲ ರಸ್ತೆ ನಿರ್ಮಾಣದ ಉದ್ದೇಶವೇ ವಿಫಲವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೋಟೆ–ಗಂಗೂರು ರೈಲ್ವೆ ಹಳಿ ದಾಟಿದ ಬಳಿಕ ಖಜಾನೆ ಬಡಾವಣೆ ಮೂಲಕ ಹಾದುಹೋಗಬೇಕಿದ್ದ 200 ಅಡಿ ರಸ್ತೆ ಹಾಗೂ ಬಿ.ಆರ್. ರಸ್ತೆಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ದಾಟಿ ಅನುಪಿನಕಟ್ಟೆಯವರೆಗಿನ ವರ್ತುಲ ರಸ್ತೆ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ದೂರಿದರು.

ಎಪಿಎಂಸಿ ಹಿಂಭಾಗದ ಶ್ರೀಗಂಧ ಕಾವಲು ಪ್ರದೇಶದ ಹಾಲಕೊಳದಲ್ಲಿರುವ ಅರಣ್ಯ ಇಲಾಖೆಯ ಸುಮಾರು 12.50 ಎಕರೆ ಜಾಗವನ್ನು ಹಸಿರು ವಲಯದ ಬದಲಿಗೆ ಸಾರ್ವಜನಿಕ ವಲಯವೆಂದು ಗುರುತಿಸಲಾಗಿದೆ.

ಇದಕ್ಕೆ ನಮ್ಮ ವಿರೋಧವಿದೆ. ತಾವರೆಚನ್ನಹಳ್ಳಿ ಒಳಚರಂಡಿ ಸಂಸ್ಕರಣಾ ಘಟಕದ ಪಕ್ಕದ ಪ್ರದೇಶವನ್ನೂ ಹಸಿರು ವಲಯದಿಂದ ಸಾರ್ವಜನಿಕ ಪ್ರದೇಶವನ್ನಾಗಿ ಬದಲಾಯಿಸಲಾಗಿದೆ.

ಜ್ಞಾನನಗರಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೈಬಿಟ್ಟಿರುವುದು ಹಾಗೂ ವಿನೋಬನಗರ ಎರಡನೇ ಹಂತದ ಸಿ.ಎ. ನಿವೇಶನಕ್ಕೆ ಸಂಬಂಧಿಸಿದ ಪ್ರಸ್ತಾವನೆಯ ಬಗ್ಗೆಯೂ ಆಕ್ಷೇಪಣೆ ಇದೆ ಎಂದರು

ಉದ್ಯಾನಗಳಲ್ಲಿ ನಿರ್ಮಿಸಿರುವ ಕಟ್ಟಡಗಳನ್ನೂ ಹಸಿರು ಪ್ರದೇಶದ ಭಾಗವಾಗಿ ಪರಿಗಣಿಸಿರುವುದರಿಂದ ವಾಸ್ತವಿಕ ಹಸಿರು ಪ್ರದೇಶಕ್ಕಿಂತ ಹೆಚ್ಚಿನ ಪ್ರಮಾಣ ತೋರಿಸಲಾಗಿದೆ. ನಗರದ ನೈಜ ಹಸಿರು ಪ್ರದೇಶವು ಒಟ್ಟು ವಿಸ್ತೀರ್ಣದ ಶೇ 5ಕ್ಕಿಂತ ಕಡಿಮೆ ಇರಬಹುದು ಎಂದರು.

ಅರಣ್ಯೀಕರಣ, ಹಸಿರು ಕಾರಿಡಾರ್ಗೆ ಒತ್ತಾಯ|

ಮಲೆನಾಡಿನ ಪರಿಸರ ಸಂರಕ್ಷಣೆಗೆ ಮಾಸ್ಟರ್ ಪ್ಲಾನ್‌ನಲ್ಲಿ ಆದ್ಯತೆ ನೀಡಬೇಕು. ಹೊಸ ಬಡಾವಣೆಗಳಲ್ಲಿ ಶೇ 15ರಿಂದ 20ರಷ್ಟು ಜಾಗವನ್ನು ನಗರ ಅರಣ್ಯೀಕರಣಕ್ಕೆ ಮೀಸಲಿಡಬೇಕು.

ತುಂಗಾ ಮೇಲ್ದಂಡೆ ಹಾಗೂ ತುಂಗಾ, ಭದ್ರಾ ನದಿಗಳ ಎರಡೂ ದಂಡೆಗಳಲ್ಲಿ ಕನಿಷ್ಠ 100 ಅಡಿ ಅಗಲದ ಹಸಿರು ಕಾರಿಡಾರ್ ನಿರ್ಮಿಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಹಸಿರು ಬಫರ್ ವಲಯಗಳನ್ನು ರೂಪಿಸಬೇಕು.

ಹಸಿರು ಪರಿಸರ, ಶುದ್ಧ ಗಾಳಿ ಹಾಗೂ ಆರೋಗ್ಯಕರ ವಾತಾವರಣಕ್ಕೆ ಪೂರಕವಾದ ಯೋಜನೆ ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.

ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ತಲಾ ಕನಿಷ್ಠ ಐದು ಹೆಕ್ಟೇರ್ ವಿಸ್ತೀರ್ಣದ ಎರಡು ಕ್ರೀಡಾಂಗಣಗಳನ್ನು ನಿರ್ಮಿಸಬೇಕು.

ಬಿ.ಎಚ್. ರಸ್ತೆ ಹಾಗೂ ಹೊನ್ನಾಳಿ ರಸ್ತೆ ಭಾಗಗಳಲ್ಲಿ ತಲಾ ಒಂದು ಟ್ರಕ್ ಟರ್ಮಿನಲ್ ಸ್ಥಾಪಿಸಬೇಕು. ವಿಸ್ತರಣೆಯಾಗುತ್ತಿರುವ ಬಡಾವಣೆಗಳಲ್ಲಿ ಆಟೊ ಮತ್ತು ಟ್ಯಾಕ್ಸಿ ನಿಲ್ದಾಣಗಳಿಗೆ ಸ್ಥಳ ಮೀಸಲಿಡಬೇಕು ಎಂದು ಆಗ್ರಹಿಸಿದರು.

ನಾಗರೀಕ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಎಸ್. ಬಿ. ಅಶೋಕ್ ಕುಮಾರ್, ಕೇಶವ ಮೂರ್ತಿ, ಮಹಮದ್ ಇಕ್ಬಾಲ್, ನಾಗರಾಜ್, ಭಾಸ್ಕರ್ ಶೆಟ್ಟಿ, ಪರಿಸರ ಕ್ಕಾಗಿ ನಾವು ಜನಾರ್ಧನ್ ಪೈ, ಚನ್ನವೀರಪ್ಪ, ಆನಂದ್, ತಿಮ್ಮಣ್ಣ, ಗೌರೀಶ್ ಭಾರ್ಗವ್ ಇದ್ದರು.

Follow Us

Leave a Reply

Your email address will not be published. Required fields are marked *

Back to top button