InternationalNationalPoliticalShivamogga

ಕೊನೆಗೂ ಭಾರತಕ್ಕೆ ಮಣಿದ ಅಮೇರಿಕ|ಸುಂಕ ಇಳಿಸಲು ಒಪ್ಪಿದ ಟ್ರಂಪ್|‌ಶಾಂತಿ ಪ್ರಯತ್ನಗಳಿಗೆ ಭಾರತದ ಬೆಂಬಲ-ಪ್ರಧಾನಿ ಮೋದಿ|ಸಂಸದ ಬಿ.ವೈ.ರಾಘವೇಂದ್ರ ಸ್ವಾಗತ

ಸೋಮವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿದ್ದ ಟ್ರಂಪ್‌, ಭಾರತದ ಪ್ರಧಾನಿಯೊಂದಿಗೆ ಮಾತನಾಡುವುದು ತಮಗೆ ಗೌರವದ ಸಂಗತಿ ಎಂದು ಹೇಳಿದ್ದಾರೆ.

ನವದೆಹಲಿ: ಭಾರತದ ಮೇಲೆ ಅತಿ ಹೆಚ್ಚು ಸುಂಕ ವಿಧಿಸುವ ಮೂಲಕ ಭಾರತದೊಂದಿಗೆ ಹಣಾಹಣಿಗೆ ಇಳಿದಿದ್ದ ಅಮೇರಿಕ, ಕೊನೆಗೂ ತನ್ನ ಮೊಂಡುತನ ಕೈಬಿಟ್ಟಿದೆ. ಭಾರತದೊಂದಿಗೆ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವದಾಗಿ ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ್ದಾರೆ.

ಭಾರತದ ಮೇಲೆ ಕಿಡಿಕಾರುತ್ತಿದ್ದ ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್‌ ಕರೆ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಬಳಿಕ ಪ್ರಧಾನಿ ಮೋದಿ ಅವರು, ಭಾರತೀಯ ರಫ್ತಿನ ಮೇಲೆ ಕೇವಲ ಶೇ.18 ರಷ್ಟು ಸುಂಕ ವಿಧಿಸುವದಾಗಿ ಅಮೇರಿಕ ಅಧ್ಯಕ್ಷ ಹಾಗೂ ನನ್ನ ಆತ್ಮೀಯ ಸ್ನೇಹಿತ ಡೊನಾಲ್ಡ್‌ ಟ್ರಂಪ್‌ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಮಧ್ಯೆ ರಷ್ಯಾದಿಂದ ತೈಲ ಖರೀಧಿಯನ್ನು ನಿಲ್ಲಿಸುವದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

ವಿಶ್ವದ ದೊಡ್ಡಣ್ಣ ಆಮೇರಿಕದ ವಿರುದ್ದವೇ ಸೆಡ್ಡು ಹೊಡೆದು ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ, ಕೊನೆಗೂ ಅಮೇರಿಕದ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರೇ ಭಾರತಕ್ಕೆ ಶರಣಾಗುವಂತೇ ಮಾಡಿದ್ದಾರೆ.

ಭಾರತದ ರಫ್ತುಗಳ ಮೇಲೆ ಶೇ.25ರಷ್ಟು ಸುಂಕ ಹೇರುವ ಮೂಲಕ ನೇರವಾಗಿ ಭಾರತದ ವಿರುದ್ದ ರಾಜಕೀಯ ಯುದ್ದ ಸಾರಿದ್ದ ಅಮೇರಿಕ, ಈಗ ಶೇ.25ರಿಂದ ಶೇ.18 ಕ್ಕೆ ಸುಂಕ ಇಳಿಸಲು ಒಪ್ಪಿದೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಂಪ್‌ ಫೋನ್‌ ಕರೆ ಮಾಡಿ ಚರ್ಚೆ ಮಾಡಿದ್ದು ವಿಶೇಷ. ಸುಂಕ ಪರಿಹಾರಕ್ಕೆ ಪ್ರತಿಯಾಗಿ ಭಾರತವು ಅಮೆರಿಕದ ಸರಕುಗಳ ಮೇಲಿನ ಎಲ್ಲಾ ಸುಂಕಗಳನ್ನು ಶೂನ್ಯಕ್ಕೆ ಇಳಿಸಿ ವಾಷಿಂಗ್ಟನ್‌ನಿಂದ $500 ಬಿಲಿಯನ್ ಮೌಲ್ಯದ ಇಂಧನ, ಕೃಷಿ, ಕಲ್ಲಿದ್ದಲು ಮತ್ತು ತಂತ್ರಜ್ಞಾನವನ್ನು ಖರೀದಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿದ್ದ ಟ್ರಂಪ್‌, ಭಾರತದ ಪ್ರಧಾನಿಯೊಂದಿಗೆ ಮಾತನಾಡುವುದು ತಮಗೆ ಗೌರವದ ಸಂಗತಿ ಎಂದು ಹೇಳಿದ್ದಾರೆ.

ಮೋದಿ ಅವರು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಅವರು ಭಾರತದ ಪ್ರಭಾವಿ ಮತ್ತು ಗೌರವಾನ್ವಿತ ನಾಯಕ ಎಂದು ಕೊಂಡಾಡಿದ್ದಾರೆ.

ವ್ಯಾಪಾರ, ರಷ್ಯಾ ಮತ್ತು ಉಕ್ರೇನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ.

ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಮತ್ತು ಅಮೆರಿಕದಿಂದ ಮತ್ತು ಬಹುಶಃ ವೆನೆಜುವೆಲಾದಿಂದ ಹೆಚ್ಚಿನದನ್ನು ಖರೀದಿಸಲು ಪ್ರಧಾನಿ ಮೋದಿ ಅವರು ಒಪ್ಪಿಕೊಂಡರು ಎಂದು ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರೊಂದಿಗಿನ ಸ್ನೇಹ ಮತ್ತು ಗೌರವದಿಂದ ಮತ್ತು ಅವರ ಕೋರಿಕೆಯ ಮೇರೆಗೆ, ತಕ್ಷಣವೇ ಜಾರಿಗೆ ಬರುವಂತೆ, ನಾವು ಅಮೇರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿದ್ದೇವೆ.

ಆ ಮೂಲಕ ಅಮೇರಿಕವು ಕಡಿಮೆ ಪರಸ್ಪರ ಸುಂಕವನ್ನು ವಿಧಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಇದ್ದ ಶೇ.25% ಸುಂಕವನ್ನು 18% ಕ್ಕೆ ಇಳಿಸಲಾಗುತ್ತಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ನನ್ನ ಆತ್ಮೀಯ ಗೆಳೆಯ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿದ್ದು ತಮಗೆ ಅತೀವ ಸಂತೋಷ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ 18% ಕಡಿಮೆ ಸುಂಕವನ್ನು ಹೊಂದಿರುವುದು ಸಂತೋಷ ತಂದಿದೆ.

ಈ ಅದ್ಭುತ ಘೋಷಣೆಗಾಗಿ ಭಾರತದ 1.4 ಬಿಲಿಯನ್ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ X ಖಾತೆಯಲ್ಲಿ ತಿಳಿಸಿದ್ದಾರೆ. ಟ್ರಂಪ್ ಅವರ ಶಾಂತಿ ಪ್ರಯತ್ನಗಳಿಗೆ ಭಾರತದ ಬೆಂಬಲವಿದೆ ಎಂದು ಘೋಷಿಸಿದರು.

ಪ್ರಧಾನಿ ಮೋದಿ ಅವರಿಗೆ ಕರೆ ಮಾಡುವ ಕೆಲವು ಗಂಟೆಗಳ ಮೊದಲೇ, ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನವದೆಹಲಿಯಲ್ಲಿರುವ ಇಂಡಿಯಾ ಗೇಟ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದು ಹಲವು ಕುತೂಹಲಕ್ಕೆ ಕಾರಣವಾಗಿತ್ತು.

ಭಾರತದ ವಿರುದ್ದ ಕೆಂಡಕಾರುತ್ತಿದ್ದ ಟ್ರಂಪ್ ಅವರ ಹಠಾತ್‌ ನಡೆಯನ್ನು, ಇದು ಭಾರತೀಯ ವ್ಯಾಪಾರ ನೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಅರ್ಥೈಸಲಾಗಿತ್ತು.

ಒಟ್ಟಾರೇ, ಭಾರತದ ವಿರುದ್ದ ಅತಿ ಹೆಚ್ಚು ಸುಂಕ ಹೇರುವ ಮೂಲಕ ಬಹಿರಂಗವಾಗಿ ಜಗಳಕ್ಕಿಳಿದಿದ್ದ ಡೊನಾಲ್ಡ್‌ ಟ್ರಂಪ್‌, ಜಗತ್ತಿನ ಇತರೆ ದೇಶಗಳು ತನ್ನ ವಿರುದ್ದ ಒಂದಾಗುತ್ತಿರುವದನ್ನು ಮತ್ತು ವಿಶೇಷವಾಗಿ ರಷ್ಯಾ ಮತ್ತು ಚೀನಾ ದೇಶಗಳೂ ಭಾರತದ ಜೊತೆ ಹತ್ತಿರವಾಗುತ್ತಿರುವುದು ಅವರನ್ನು ಚಿಂತೆಗೀಡು ಮಾಡಿಸಿತ್ತು.

ಈಗ ಸುಂಕ ಇಳಿಸುವ ಮೂಲಕ ಭಾರತದ ಜತೆ ಮತ್ತೆ ಸ್ನೇಹಕ್ಕೆ ಕೈ ಚಾಚಿದ್ದರ ಹಿಂದೆ ಡೊನಾಲ್ಡ್‌ ಟ್ರಂಪ್‌ ಹೊಸ ಯೋಜನೆ ಇದರ ಹಿಂದಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಮಧ್ಯೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಭಾರತ ಹಾಗೂ ಅಮೇರಿಕ ಮಧ್ಯೆ ಹೊಸ ವ್ಯಾಪಾರ ಒಪ್ಪಂದ ನಡೆದಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಭಾರತ-ಅಮೆರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ನಿರ್ಣಾಯಕ ನಾಯಕತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವರದಿ: ಸೌಮ್ಯ ರೆಡ್ಡಿ
ನ್ಯಾಷನಲ್‌ ಬ್ಯುರೋ
ನ್ಯೂಇಂಡಿಯಾ ಕನ್ನಡ

Follow Us

Leave a Reply

Your email address will not be published. Required fields are marked *

Back to top button