Shivamoggaಶಿವಮೊಗ್ಗ ದಸರಾ-2026
Trending

ಶಿವಮೊಗ್ಗ ದಸರಾ-2026 ಅದ್ದೂರಿ ಉತ್ಸವಕ್ಕೆ ಚಾಲನೆ|ಚಾಮುಂಡೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ| ಮಲೆನಾಡಿಗರದ್ದು ಕಪಟವಿಲ್ಲದ ಹೃದಯ-ನಟ ಶ್ರೀನಾಥ್‌

ವಸ್ತ್ರಾಭರಣಗಳಿಂದ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಕೋಟೆ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಧಿ ವಿಧಾನದ ಅನುಸಾರ ಪ್ರತಿಷ್ಠಾಪಿಸಲಾಯಿತು.

ಶಿವಮೊಗ್ಗ: ನವರಾತ್ರಿಯ ಮೊದಲ ದಿನವಾದ ಭಾನುವಾರದಂದು ಮೈಸೂರು ದಸರಾ ಮಾದರಿಯಲ್ಲೇ ಶಿವಮೊಗ್ಗ ದಸರಾ-2026 ಉತ್ಸವ ಆರಂಭಗೊಂಡಿತು.

ಕೋಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಣಯರಾಜ ಹಿರಿಯ ನಟ ಶ್ರೀನಾಥ್ ಚಾಲನೆ ನೀಡಿದರು.

ಬೆಳಿಗ್ಗೆ ಮಹಾನಗರ ಪಾಲಿಕೆ ಆವರಣದಿಂದ ವಸ್ತ್ರಾಭರಣಗಳಿಂದ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಕೋಟೆ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಧಿ ವಿಧಾನದ ಅನುಸಾರ ಪ್ರತಿಷ್ಠಾಪಿಸಲಾಯಿತು.

ಮಹಾನಗರ ಪಾಲಿಕೆ ಆವರಣದಿಂದ ಶಾಸಕ ಎಸ್‌.ಎನ್‌.ಚೆನ್ನಬಸಪ್ಪ ನೇತೃತ್ವದಲ್ಲಿ, ಕಲಾತಂಡಗಳು, ವಾದ್ಯಮೇಳಗಳೊಂದಿಗೆ ಮೆರವಣಿಗೆ ಮೂಲಕ ಕೋಟೆ ದುರ್ಗಾಪರಮೇಶ್ವರಿ ದೇವಾಲಯ ತಲುಪಿತು.

ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್‌.ಸಿ.ಯೋಗೀಶ್ , ಜವಳಿ ನಿಗಮದ ಅಧ್ಯಕ್ಷ ಚೇತನ್‌ಗೌಡ, ಸೂಡಾ ಅಧ್ಯಕ್ಷ ಸಿ.ಜಿ.ಮಧುಸೂದನ್ ಭಾಗವಹಿಸಿ, ವಾದ್ಯಮೇಳದ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಉದ್ಘಾಟಕ ನಟ ಶ್ರಿನಾಥ್ ಕೂಡ ಉತ್ಸಾಹದಿಂದ ಹೆಜ್ಜೆ ಹಾಕಿ ಮೆರವಣಿಗೆಗೆ ಮತ್ತಷ್ಟು ರಂಗು ತಂದರು.

ನಂದೀಧ್ವಜ, ವೀರಗಾಸೆ, ಆಕರ್ಷಕ ಕಲಾಕೃತಿಗಳ ಗೊಂಬೆಗಳು ಕೀಲುಕುದುರೆ, ಡೊಳ್ಳುಕುಣಿತ ಆಕರ್ಷಕ ಕಲಾತಂಡಗಳ ನೃತ್ಯ ವೈಭೋಗದೊಂದಿಗೆ 11 ದಿನಗಳ ದಸರಾಕ್ಕೆ ಅದ್ದೂರಿ ಚಾಲನೆ ಸಿಕ್ಕಿತು.

ಹಿರಿಯ ನಟ ಶ್ರೀನಾಥ್ ಮಾತನಾಡಿ, ಮಲೆನಾಡಿಗರ ನಗು, ಆತಿಥ್ಯಕ್ಕೆ ಮನಸೋತಿದ್ದೇನೆ. ಇಲ್ಲಿನ ಜನರ ಕಪಟವಿಲ್ಲದ ಹೃದಯತುಂಬಿದ ಮಲೆನಾಡಿಗರ ನಗುವೇ ಚೆಂದವೆಂದು ಬಣ್ಣಿಸಿದರು.

ಬೆಂಗಳೂರಿನಲ್ಲಿ ಎಲ್ಲೆಡೆ ಕೃತಕ ನಗು ಕಾಣಸಿಗುತ್ತದೆ. ಇಂತಹ ಹೃದಯವಂತರ ನಗು ಕರ್ನಾಟಕವನ್ನ ಪಸರಿಸಲೆಂದು ಆಶಿಸಿದರು.

ಮೈಸೂರಾ ದಸರಾ ನೋಡಿದ್ದ ನನಗೆ ಶಿವಮೊಗ್ಗ ದಸರಾ ಬಗ್ಗೆ ಕೇಳಿದ್ದೆ, ನೋಡಬೇಕೆಂಬ ಬಯಕೆ ಇತ್ತು. ದೇವಿ ಕೃಪೆಯಿಂದಾಗಿ ಅತಿಥಿಯಾಗಿ ದಸರಾ ಉದ್ಘಾಟಿಸುವ ಅವಕಾಶ ದೊರೆತು ಆಸೆ ಈಡೇರಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನವರಾತ್ರಿ ಎಂದರೆ ಕೆಡುಕಿನ ಮೇಲೆ ಒಳ್ಳೆಯದರ ವಿಜಯವಾಗಿದೆ. ಹಿಂದಿನಂತೆ ಸಂಹರಿಸಲು ರಾಕ್ಷಸರಿಲ್ಲ ಎಂದು ಹೇಳಿದರು.

ಇತಿಹಾಸದಲ್ಲೇ ಕಾಣದಂತಹ ಬರಗಾಲ, ತಾಪಮಾನ ನೋಡುತ್ತಿದ್ದೇವೆ ಪ್ರಕೃತಿಮೇಲಿನ ಮಾನವನ ದೌರ್ಜನ್ಯಕ್ಕೆ ಪರಿತಪಿಸಬೇಕಾಗಿದೆ ಎಂದರು.

ತಾಯಿ ಚಾಮುಂಡೇಶ್ವರಿ ದೇವಿ ಅನುಗ್ರಹಿಸಿ ಬರಗಾಲ ನೀಗಿಸಿ ಮನುಕುಲ ತಂಪಾಗಿಸಬೇಕೆಂಬುದು ತಾಯಿಯಲ್ಲಿ ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದು ಹೇಳಿದರು.

ಶಾಸಕ ಎಸ್‌.ಎನ್‌.ಚೆನ್ನಬಸಪ್ಪ ಮಾತನಾಡಿ, ಈ ಮಹೋತ್ಸವವು ಕೇವಲ ಶಿವಮೊಗ್ಗ ನಗರಕ್ಕೆ ಮಾತ್ರವಲ್ಲದೆ, ಸಮಗ್ರ ಜಿಲ್ಲೆಯ ಸಮಸ್ತ ಜನತೆಗೆ ಹರ್ಷ, ಸಡಗರ ಹಾಗೂ ಆನಂದವನ್ನು ಪಸರಿಸುವ ಜನಪರ ನಾಡಹಬ್ಬವಾಗಿದೆ ಎಂದರು.

ನಮ್ಮ ಪರಂಪರೆಯ ಶಕ್ತಿ, ಸಾಮರಸ್ಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಈ ಸಾಂಸ್ಕೃತಿಕ ಹಬ್ಬದಲ್ಲಿ ನಗರದ ಸಮಸ್ತ ನಾಗರೀಕರು, ಕಲಾ ರಸಿಕರು, ಮಾತೃಶಕ್ತಿ ಹಾಗೂ ಯುವಮಿತ್ರರು ಕುಟುಂಬ ಸಮೇತರಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕೋರಿದರು.

ಹಿರಿಯ ನಟ ಶ್ರೀನಾಥ್ ಅವರಿಗೆ ಕೋಟೆ ದುರ್ಗಾಪರಮೇಶ್ವರಿ ದೇವಿಯ ವಿಗ್ರಹ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಪಾಲಿಕೆ ಆಯಕ್ತ ಮಾಯಣ್ಣಗೌಡ, ವಿವಿಧ ದಸರ ಸಮಿತಿ ಸದಸ್ಯರು ಮಾಜಿ, ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು, ನೂರಾರು ಸಂಖ್ಯೆಯ ಮಹಿಳಾ ಭಕ್ತರು ಭಾಗವಹಿಸಿದ್ದರು.

Follow Us

Leave a Reply

Your email address will not be published. Required fields are marked *

Back to top button