AgricultureDistrictShivamogga

ತುಂಗಾ ಏತ ನೀರಾವರಿಯ ವಿದ್ಯುತ್‌ ಬಿಲ್‌ ಬಾಕಿ ವಿಚಾರ|ಕೂಡಲೇ 10ಕೋಟಿರೂ.ಹಣ ಪಾವತಿಸಲು ರೈತರ ಆಗ್ರಹ|ಡಿಸಿ ಕಚೇರಿ ಮುಂದೆ ಬಸವರಾಜಪ್ಪ ನೇತೃತ್ವದಲ್ಲಿ ಅನ್ನದಾತರ ಪ್ರತಿಭಟನೆ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಹೆಚ್.‌ಆರ್‌.ಬಸವರಾಜಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯಕ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಶಿವಮೊಗ್ಗ: ಜಿಲ್ಲೆಯ ತುಂಗಾ ಏತ ನೀರಾವರಿಯ ವಿದ್ಯುತ್‌ ಬಿಲ್‌ ಬಾಕಿ ಹಣ ಈ ಕೂಡಲೇ ಪಾವತಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು , ಏತನೀರಾವರಿ ವಿದ್ಯುತ್‌ ಬಾಕಿ ಬಗ್ಗೆ ಚಕಾರ ಎತ್ತದೆ ಇರುವುದನ್ನು ರೈತರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಹೆಚ್.‌ಆರ್‌.ಬಸವರಾಜಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯಕ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.‌ಆರ್‌.ಬಸವರಾಜಪ್ಪ, ಶಿವಮೊಗ್ಗ ತಾಲೂಕಿನ ಹಾಯ್‌ಹೊಳೆ, ಬಾರೇಹಳ್ಳ, ಗೌಡನಕೆರೆಗಳಿಗೆ ತುಂಗಾ ನದಿಯಿಂದ ಗಾಜನೂರು ಬಳಿ ಏತ ನೀರಾವರಿ ಮೂಲಕ ನೀರು ತುಂಬಿಸಿ 28 ಹಳ್ಳಿಗಳ ಸುಮಾರು 7500 ಎಕರೆಗೆ ನೀರು ಹರಿಸಲಾಗುತ್ತದೆ.

ಸುಮಾರು 8 ವರುಷಗಳಿಂದ ಚಾಲನೆಯಲ್ಲಿರುವ ಈ ಪ್ರಕ್ರಿಯೆಗೆ ಈಗ ಸರ್ಕಾರವು ವಿದ್ಯುತ್‌ ಬಿಲ್‌ ಪಾವತಿ ಮಾಡದ ಕಾರಣ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಹೆಚ್.‌ಆರ್‌.ಬಸವರಾಜಪ್ಪ ಹೇಳಿದರು.

ಈವರೆಗೆ ರೈತರ ಹಿತದೃಷ್ಟಿಯಿಂದ ಪ್ರತಿ ವರುಷ ಬಿಲ್‌ ಪಾವತಿ ಮಾಡುತ್ತಿದ್ದ ಸರ್ಕಾರವು ಈ ವರುಷ ಬಿಲ್‌ ಪಾವತಿ ಮಾಡದ ಕಾರಣ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿಸಿದರು.

ಇತ್ತಿಚೆಗೆ ಜಿಲ್ಲೆಗೆ ಬಂದಿದ್ದ ವಿದ್ಯುತ್‌ ಸಚಿವ ಕೆ.ಜೆ.ಜಾರ್ಜ್‌ ಈ ನಿಟ್ಟಿನಲ್ಲಿ ಗಮನವಹಿಸಬೇಕಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ರೈತರ ಹಿತ ಕಾಪಾಡಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಹೆಚ್.‌ಆರ್‌.ಬಸವರಾಜಪ್ಪ ಆಗ್ರಹಿಸಿದರು.

ಸರ್ಕಾರ ಈ ಕೂಡಲೇ ಕನಿಷ್ಟ 10 ಕೋಟಿರೂ. ಹಣವನ್ನು ತುರ್ತಾಗಿ ಪಾವತಿ ಮಾಡುವ ಮೂಲಕ ರೈತರ ಹಿತರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು. ಸರ್ಕಾರ ಬಿಲ್‌ ಪಾವತಿ ಮಾಡದೇ ಇದ್ದ ಪಕ್ಷದಲ್ಲಿ ರೈತರು ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವು ರೈತರು, ಸರ್ಕಾರದ ಧೋರಣೆಯನ್ನು ಖಂಡಿಸಿ ಮಾತನಾಡಿದರು.

ಬಳಿಕ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಪ್ರಭುಲಿಂಗ್‌ ಕವಳಿಕಟ್ಟಿ ಅವರಿಗೆ ನೀಡಿದರು.

ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಭಾಗ್ಯ ರಾಘವೇಂದ್ರ, ಹಿಟ್ಟೂರು ರಾಜು, ಎಂ.ಡಿ.ನಾಗರಾಗ್‌, ಕಸಟ್ಟ ರುದ್ರೇಶ್‌, ಪಿ.ಡಿ.ಮಂಜಪ್ಪ, ಇ.ಬಿ.ಜಗದೀಶ್‌, ಸಿ.ಬಿ.ಹನುಮಂತಪ್ಪ, ಜಿ.ಎನ್.ಪಂಚಾಕ್ಷರಿ, ಸಿ.ಪಿ.ನಾಗರಾಜು, ಕೆ.ಎನ್.ಜ್ಞಾನೇಶ್‌ ಭಾಗವಹಿಸಿದ್ದರು.

Follow Us

Leave a Reply

Your email address will not be published. Required fields are marked *

Back to top button