ಹೊಸನಗರ:ಮಹಿಳೆಯ ಕತ್ತಿನಲ್ಲಿದ್ದ ಚಿನ್ನ ಎಗರಿಸಿದ ಕಳ್ಳರು|ಹೊಟೇಲ್ ಮುಂದೆ ಕಸ ಗುಡಿಸುತ್ತಿದ್ದ ವೇಳೆ ಘಟನೆ|ಆರೋಪಿಗಳನ್ನು ಬಂಧಿಸಿದ ಪೊಲೀಸರು
ಚಿನ್ನದ ಸರ ಕಳೆದುಕೊಂಡ ಶ್ರೀಮತಿ ಗಾಯತ್ರಿ ಅವರು ನೀಡಿರುವ ದೂರಿನಲ್ಲಿ ತಿಳಿಸಿದಂತೇ , ಓರ್ವ ಆರೋಪಿ ಬೈಕ್ ಮೇಲೆ ಕುಳಿತಿದ್ದರೆ, ಮತ್ತೊಬ್ಬ ಹೋಟೆಲ್ ಬಳಿ ಬಂದು ಮಾತಿನ ನೆಪದಲ್ಲಿ ಗಮನ ಬೇರೆಡೆ ಸೆಳೆದಿದ್ದಾನೆ.

ಶಿವಮೊಗ್ಗ/ಹೊಸನಗರ: ಕಸ ಗುಡಿಸುತ್ತಿದ್ದ ಮಹಿಳೆಯ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಹೊಸನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಹಮ್ಮದ್ ತೌಸಿಫ್, ತಂದೆ ಇಬ್ರಾಹಿಂ ಮಹಮ್ಮದ್, 38 ವರ್ಷ, ನಿವಾಸಿ ಹೆಡೂರು ಗ್ರಾಮ, ಉಡುಪಿ ಜಿಲ್ಲೆ ಹಾಗೂ ಬೋನಿಫಲ್ ರೋಷನ್ ಕುನ್ನಿ, ತಂದೆ ರೈಮಂಡ್ ಕುನ್ನಿ, 44 ವರ್ಷ, ನಿವಾಸಿ ಆಮಲಗೂರು ಗ್ರಾಮ, ದಕ್ಷಿಣ ಕನ್ನಡ ಜಿಲ್ಲೆ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 1,80,000ರೂ. ಮೌಲ್ಯದ ಸುಮಾರು 12 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ನೀಲಿ ಬಣ್ಣದ ಯಮಹಾ ಸುಜುಕಿ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಗಿದ್ದೇನು?
ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೊನಲೆ ಗ್ರಾಮದ ನಿವಾಸಿಯಾದ ಶ್ರೀಮತಿ ಗಾಯತ್ರಿ ಅವರು ದಿನಾಂಕಃ 14-07-2026 ರಂದು ಬೆಳಿಗ್ಗೆ ಸುಮಾರು 6:30 ಗಂಟೆಗೆ ತಮ್ಮ ಹೋಟೆಲ್ ಮುಂಭಾಗದಲ್ಲಿ ಕಸ ಗುಡಿಸುತ್ತಿದ್ದರು.
ಈ ವೇಳೆ, ನೀಲಿ ಬಣ್ಣದ ಸುಜುಕಿ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದರು. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು.
ಚಿನ್ನದ ಸರ ಕಳೆದುಕೊಂಡ ಶ್ರೀಮತಿ ಗಾಯತ್ರಿ ಅವರು ನೀಡಿರುವ ದೂರಿನಲ್ಲಿ ತಿಳಿಸಿದಂತೇ , ಓರ್ವ ಆರೋಪಿ ಬೈಕ್ ಮೇಲೆ ಕುಳಿತಿದ್ದರೆ, ಮತ್ತೊಬ್ಬ ಹೋಟೆಲ್ ಬಳಿ ಬಂದು ಮಾತಿನ ನೆಪದಲ್ಲಿ ಗಮನ ಬೇರೆಡೆ ಸೆಳೆದಿದ್ದಾನೆ.
ಆಗ ಹಿಂಬದಿಯಿಂದ ಬಂದು ಮತ್ತೋರ್ವ ಕಳ್ಳ, ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.
ಕೃತ್ಯದಲ್ಲಿ ಸರದ ಅರ್ಧ ಭಾಗ ಕಿತ್ತುಹೋಗಿದ್ದು, ಉಳಿದ ಸುಮಾರು 10 ಗ್ರಾಂ ಚಿನ್ನದ ಸರ ಹಾಗೂ 2 ಗ್ರಾಂ ತೂಕದ ಎರಡು ಗುಂಡುಗಳು ಸೇರಿ ಒಟ್ಟು ಸುಮಾರು ₹1,80,000 ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ.
ಕಳ್ಳರನ್ನು ಚೇಸ್ ಮಾಡುವಲ್ಲಿ ಪೊಲೀಸರು ಸಕ್ಸಸ್|
ದೂರು ದಾಖಲಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಹೊಸನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ನಿಖಿಲ್ ಅವರ ಮಾರ್ಗದರ್ಶನದಲ್ಲಿ, ಹೊಸನಗರ ವೃತ್ತ ನಿರೀಕ್ಷಕ ಹಾಗೂ ಸಿಬ್ಬಂದಿಯ ತಂಡ ಸಾರ್ವಜನಿಕರು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







