Bengaluru RuralKarnataka

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್ ನಿಯಮ|ಚಾಲಕರಿಂದ ತೀವ್ರ ವಿರೋಧ,ಪ್ರತಿಭಟನೆ|ಯಥಾಸ್ಥಿತಿ ಕಾಯ್ದುಕೊಳ್ಳಲು ಸಂಸದ ಡಾ.ಕೆ.ಸುಧಾಕರ್‌ ಸೂಚನೆ

ಖಾಸಗಿ ಟ್ಯಾಕ್ಸಿ ಚಾಲಕರಿಗೆ ಮೊದಲಿನಂತೆಯೇ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು, ಅದಕ್ಕೆ ಪೂರಕವಾಗಿ ನಿಯಮ ರೂಪಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್‌ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಟ್ಯಾಕ್ಸಿ ಚಾಲಕರು ಹಾಗೂ ಪ್ರಾಧಿಕಾರದ ನಡುವಿನ ಸಂಧಾನ ಸಭೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದೆ.

ಖಾಸಗಿ ಟ್ಯಾಕ್ಸಿ ಚಾಲಕರಿಗೆ ಮೊದಲಿನಂತೆಯೇ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು, ಅದಕ್ಕೆ ಪೂರಕವಾಗಿ ನಿಯಮ ರೂಪಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್‌ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಟ್ಯಾಕ್ಸಿ ಚಾಲಕರ ಸಂಘದ ಮನವಿಯ ಮೇರೆಗೆ ಮಂಗಳವಾರ ಸಂಸದ ಡಾ.ಕೆ.ಸುಧಾಕರ್‌ ಅವರು ಚಾಲಕರು ಹಾಗೂ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಸುಮಾರು 500 ಮೀಟರ್‌ ದೂರದಲ್ಲಿ ನಿಲುಗಡೆ ಕಲ್ಪಿಸಲಾಗಿದೆ.

ವಿಮಾನದಿಂದ ಇಳಿದು ಬಂದ ಪ್ರಯಾಣಿಕರು ನಡೆದುಕೊಂಡು ಹೋಗಿ ಟ್ಯಾಕ್ಸಿ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ವಿಮಾನ ನಿಲ್ದಾಣ ಪ್ರಾಧಿಕಾರದ ಈ ಹೊಸ ಪಾರ್ಕಿಂಗ್‌ ನಿಯಮದ ವಿರುದ್ಧ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ ಸಂಸದ ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಹಾಗೂ ಸುತ್ತಮುತ್ತಲಿನ ಊರುಗಳ 18 ರಿಂದ 20 ಸಾವಿರ ಯುವಕರು ಟ್ಯಾಕ್ಸಿ ಚಲಾಯಿಸುತ್ತಿದ್ದಾರೆ.

ಇವರನ್ನೇ ನಂಬಿಕೊಂಡು ಸುಮಾರು 1 ಲಕ್ಷ ಕುಟುಂಬ ಸದಸ್ಯರು ಇದ್ದಾರೆ ಎಂದರು. ಖಾಸಗಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು 15-20 ವರ್ಷಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ.

ಇವರಲ್ಲಿ ಅನೇಕರು ಪ್ರಯಾಣಿಕರ ಜೊತೆ ನೇರ ಸಂಪರ್ಕ ಹೊಂದಿದ್ದು, ಅನೇಕ ವರ್ಷಗಳ ಪರಿಚಯದ ಮೂಲಕ ಸೇವೆ ನೀಡುತ್ತಿದ್ದಾರೆ.

ಆದರೆ ಕಳೆದ ಡಿಸೆಂಬರ್‌ 8 ರಿಂದ 500 ಮೀಟರ್‌ ದೂರದಲ್ಲಿ ಚಾಲಕರಿಗೆ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದೆ.

ಇದರಿಂದ ಸಮಸ್ಯೆ ಹೆಚ್ಚಿದೆ. ಈ ಹಿಂದೆ ನೀಡಿದ್ದ ಸ್ಥಳವನ್ನೇ ಚಾಲಕರಿಗೆ ನೀಡಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಸೂಚಿಸಿದರು.

ಖಾಸಗಿ ಕಂಪನಿಗಳು 1,200-1,500 ರೂ. ದರ ನಿಗದಿ ಮಾಡಿದರೆ, ಈ ಚಾಲಕರು ಇನ್ನೂ ಕಡಿಮೆ ದರಕ್ಕೆ ಸೇವೆ ನೀಡುತ್ತಾರೆ.

ಆದ್ದರಿಂದ ಇಲ್ಲಿ ಎಲ್ಲರಿಗೂ ಅವಕಾಶ ನೀಡಬೇಕಿದೆ. ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ದಟ್ಟಣೆ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ ಕನಿಷ್ಠ ಪ್ರಮಾಣದಲ್ಲಿ ಬಳಕೆದಾರರ ಶುಲ್ಕ ಪಡೆದು ಸ್ಥಳ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ತಿಳಿಸಿದರು.

ಅಗ್ರಿಗೇಟರ್‌ಗಳು ಎಲ್ಲ ಕಡೆ ಇದ್ದು, ಯಾರ ಸೇವೆ ಬೇಕೆಂದು ಗ್ರಾಹಕರು ತೀರ್ಮಾನ ಮಾಡುತ್ತಾರೆ ಎಂದು ಸಂಸದ ಡಾ.ಕೆ.ಸುಧಾಕರ್‌ ಅಧಿಕಾರಿಗಳಿಗೆ ಹೇಳಿದರು. ಸಭೆಯಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button