ಸಹ್ಯಾದ್ರಿ ಕಲಾ, ವಿಜ್ಞಾನ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗೆ ಕೊಕ್|ಪ್ರಸಕ್ತ ಸಾಲಿನಿಂದ ಪ್ರವೇಶಾತಿಗೆ ನಿರಾಕರಣೆ|ಕುವೆಂಪು ವಿ.ವಿ. ತೀರ್ಮಾನ ಖಂಡಿಸಿ, ಎಬಿವಿಪಿ ಪ್ರತಿಭಟನೆ
ಸ್ನಾತಕೋತ್ತರ ಪದವಿಗಳ ಪ್ರವೇಶಾತಿಯನ್ನು ನೀಡದೆ ಇರುವುದು ಸ್ಥಳೀಯ ಹಾಗೂ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮತ್ತು ಭವಿಷ್ಯದ ಬಗ್ಗೆ ದಿಗಿಲನ್ನು ಉಂಟುಮಾಡಿದೆ ಎಂದು ವಿದ್ಯಾರ್ಥಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದ ಹಳೆಯ ಕಾಲೇಜುಗಳಲ್ಲಿ ಒಂದಾದ ಸಹ್ಯಾದ್ರಿ ಕಲಾ ಹಾಗೂ ವಿಜ್ಞಾನ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ನಿರಾಕರಿಸಿರುವದನ್ನು ಖಂಡಿಸಿ, ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪ್ರತಿಭಟನೆ ನಡೆಸಿದರು.

ಗುರುವಾರದಂದು ಸಹ್ಯಾದ್ರಿ ಕಲಾ ಕಾಲೇಜು ಮುಂಭಾಗದ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಕೆಲ ಕಾಲ ಧರಣಿ ನಡೆಸಿದರು.
ಪ್ರಸಕ್ತ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳ ಪ್ರವೇಶಾತಿಯನ್ನು ನೀಡದೆ ಇರುವುದು ಸ್ಥಳೀಯ ಹಾಗೂ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮತ್ತು ಭವಿಷ್ಯದ ಬಗ್ಗೆ ದಿಗಿಲನ್ನು ಉಂಟುಮಾಡಿದೆ ಎಂದು ವಿದ್ಯಾರ್ಥಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳ ದುಬಾರಿ ಶುಲ್ಕವನ್ನು ಭರಿಸಲಾಗದ ಕಾರಣ, ಸರ್ಕಾರಿ ಸ್ವಾಮ್ಯದ ಸಹ್ಯಾದ್ರಿ ಕಾಲೇಜುಗಳನ್ನೇ ನಂಬಿಕೊಂಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಪ್ರವೇಶಾತಿಯನ್ನು ತಡೆಹಿಡಿಯುವುದು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ ಎಂದು ವಿದ್ಯಾರ್ಥಿ ನಾಯಕರು ಆರೋಪಿಸಿದರು.
ವಿದ್ಯಾರ್ಥಿಗಳ ಬೇಡಿಕೆಗಳೇನು?
ಸಹ್ಯಾದ್ರಿ ಕಲಾ ಕಾಲೇಜಿನ ಆಡಳಿತ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದ ಎಬಿವಿಪಿ ಕಾರ್ಯಕರ್ತರು, ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಅವುಗಳಲ್ಲಿ ಪ್ರಮುಖವಾಗಿ,
• ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು.
• ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸದೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು.
• ಬಿಸಿಎ ಶುಲ್ಕ ಪರಿಷ್ಕರಿಸಬೇಕು
• UUCMS ತಂತ್ರಾಂಶ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರವೇಶಾತಿಗೆ ಅವಕಾಶ ಕೊಡದಿದ್ದರೇ ಹೋರಾಟ|
ವಿಶ್ವವಿದ್ಯಾಲಯವು ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿರುವ ಎಬಿವಿಪಿ, ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿಯನ್ನು ನೀಡದೆ ನಿರ್ಲಕ್ಷ್ಯ ವಹಿಸಿದರೆ, ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ವಿಶ್ವವಿದ್ಯಾಲಯದಾದ್ಯಂತ ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಭಾಗ ಸಂಚಾಲಕ ರವಿ ಇರೋಜಿ, ವಿಭಾಗ ಸಂಘಟನಾ ಕಾರ್ಯದರ್ಶಿ ಆದಿತ್ಯ ಶೆಟ್ಟಿ, ವಿಭಾಗ ಸಂಚಾಲಕ ರವಿ ಇರೋಜಿ, ನಂದನ್, ಜಿಲ್ಲಾ ಸಂಚಾಲಕ ನಿರಂಜನ್, ನಗರ ಕಾರ್ಯದರ್ಶಿ ವಿನಯ್ ಹಿರೇಮಳಲಿ, ಶಿವಮೊಗ್ಗ ನಗರ ಸಹ ಕಾರ್ಯದರ್ಶಿ ನಿಖಿಲ್, ರಂಜಿನಿ, ಅಂಜನ್, ನಂದಿನಿ, ಚಂದನ ಸೇರಿದಂತೇ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







