ಸಾಗರ: ಶಾಸಕರ ಬೆಂಬಲಿಗರಿಂದ ಭೂಕಬಳಿಕೆ?|6 ಎಕರೆ ಗ್ರಾಮ ಠಾಣಾ ಜಾಗೆ ಗುಳುಂ|ಮಲಂದೂರು ಗ್ರಾಮಸ್ಥರಿಂದ ಜಿಪಂ ಕಚೇರಿ ಎದುರು ಧರಣಿ
ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಾಗದಲ್ಲಿ ಪ್ರಭಾವಿಗಳು, ಶಾಸಕರ ಬೆಂಬಲಿಗರು ಜಾಗದ ಮೇಲೆ ಹಕ್ಕುಸಾಧಿಸಲು ಪ್ರಯತ್ನಿಸುತ್ತಿದ್ದಾರೆಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು.

ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರ ಗ್ರಾ.ಪಂ ವ್ಯಾಪ್ತಿಯಲ್ಲಿನ ಸರ್ವೇ ನಂ 148 ರಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಗ್ರಾಮ ಠಾಣಾ ಜಾಗವನ್ನು ಶಾಸಕರ ಬೆಂಬಲಿಗರು ಭೂ ಕಬಳಿಕೆ ಮಾಡುತ್ತಿದ್ದಾರೆ ಎಂದು ಮಲಂದೂರು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಶಿವಮೊಗ್ಗದ ಜಿಲ್ಲಾ ಪಂಚಾಯತ್ ಕಚೇರಿ ಎದುರುಗಡೆ ಮಂಗಳವಾರದಂದು ದಿಢೀರ ಪ್ರತಿಭಟನೆ ನಡೆಸಿದ ಮಲಂದೂರು ಗ್ರಾಮಸ್ಥರು ಭೂಕಬಳಿಕೆ ಆಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ 6 ಎಕರೆ ಗ್ರಾಮ ಠಾಣಾ ಜಾಗವನ್ನು ಶಾಸಕರ ಬೆಂಬಲಿಗರು ಕೈವಶಮಾಡಿಕೊಂಡು ಹಕ್ಕು ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೊನಗೋಡು ಆರೋಪಿಸಿದರು.
ಸಾರ್ವಜನಿಕ ಸ್ವತ್ತನ್ನು ಕಾಪಾಡಬೇಕಾದ ಇಒ ಹಾಗೂ ಸಿಇಒ ಪರೋಕ್ಷವಾಗಿ ಭೂಕಬಳಕೆದಾರರ ಬೆನ್ನಿಗೆ ನಿಂತಿದ್ದಾರೆಂದು ಅವರ ಕಳವಳ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಾಗದಲ್ಲಿ ಪ್ರಭಾವಿಗಳು, ಶಾಸಕರ ಬೆಂಬಲಿಗರು ಜಾಗದ ಮೇಲೆ ಹಕ್ಕುಸಾಧಿಸಲು ಪ್ರಯತ್ನಿಸುತ್ತಿದ್ದಾರೆಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು.
ಇನ್ನು ಹಲವು ಭಾರಿ ಸಂಭಂದಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಭೂಮಾಫಿಯಾಕ್ಕೆ ಮಣಿದು ಸಹಕರಿಸುತ್ತಿರುವ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಗ್ರಾ ಪಂ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಆಗ್ರಹಿಸಿದರು.
ಆನಂದಪುರ ಗ್ರಾಮದ ನಾಗರೀಕರು ಹಾಗೂ ನಿರಾಶ್ರಿತ ನಿವಾಸಿಗಳ ಉಪಯೋಗಕ್ಕಾಗಿಯೇ ಗ್ರಾಮ ಠಾಣಾ ಜಾಗ ಮೀಸಲಿಡಬೇಕು ತಕ್ಷಣ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಾರ್ವಜನಿಕ ಆಸ್ಥಿಯನ್ನು ಗ್ರಾಮಸ್ಥರಿಗೇ ಉಳಿಸಿಕೊಡಬೇಕೆಂದು ಒತ್ತಾಯಿಸಿದರು.
ಮಲ್ಲಂದೂರು ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಸಿಲಿಂಡರ್ ಹಾಗೂ ಅಡುಗೆ ಪಾತ್ರೆಗಳನ್ನು ತಂದು ಸ್ಥಳದಲ್ಲೇ ಮೊಕ್ಕಾಂ ಹೂಡಿ ಅಡುಗೆ ಮಾಡುವ ಮೂಲಕ ತಮ್ಮ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವೀರೇಶ್ ಹಾಲವಳ್ಳಿ,ರವಿಕುಗ್ವೆ, ಆನಂದ್ ಮಾಸೂರು, ಗುರುರಾಜ್ , ನವೀನ, ರೇವಪ್ಪ, ಲಲಿತಮ್ಮ ಶೇಖರಪ್ಪ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







